ಕಲಬುರಗಿ: ಹಿಂದುಳಿದ ಭಾಗವಾದ ಕಲಬುರಗಿ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಆಕರ್ಷಿಸಲು ಸೇಡಂ ರಸ್ತೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ 5 ಸಾವಿರ ಎಕರೆ ಜಮೀನು ವಶಕ್ಕೆ ಪಡೆದುಕೊಂಡು ಬೇರೆ ಬೇರೆ ಉದ್ಯಮಗಳನ್ನು ಆರಂಭಿಸುವ ಹಾಗೂ ಕೈಗಾರಿಕಾ ವಲಯವನ್ನಾಗಿ ಪರಿವರ್ತಿಸುವ ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಪ್ರಕಟಿಸಿದರು.
ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕೇಂದ್ರ ಸರ್ಕಾರವು ಜಿಲ್ಲೆಗೆ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಮಂಜೂರು ಮಾಡಿದ್ದು, 1 ಸಾವಿರ ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ. ಕೈಗಾರಿಕಾ ನೀತಿ 2020-25ರಲ್ಲಿ ಬೆಂಗಳೂರಿನಾಚೆಗೆ 2 ಮತ್ತು 3ನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡುವ ಉದ್ಯಮಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ಇದರಲ್ಲಿ ಜಿಲ್ಲೆಗೆ ಗರಿಷ್ಠ ರಿಯಾಯಿತಿ ಮತ್ತು ಪ್ರೋತ್ಸಾಹ ದೊರೆಯಲು ವಲಯ 1ರಲ್ಲಿ ಸೇರಿಸಲಾಗಿದೆ ಎಂದರು.
ಜಿಲ್ಲೆಯ ಶಹಬಾದ್ ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ಪಾಳು ಬಿದ್ದಿದ್ದ ಇಎಸ್‌ಐ ಆಸ್ಪತ್ರೆಯನ್ನು ₹ 14 ಕೋಟಿ ವೆಚ್ಚದಲ್ಲಿ ನವೀಕರಿಣಗೊಳಿಸಲಾಗುತ್ತಿದ್ದು, ಶೀಘ್ರ ಸಾರ್ವಜನಿಕ ಆರೋಗ್ಯ ಸೇವೆಗೆ ಇದು ಲಭ್ಯವಾಗಲಿದೆ. ಇಎಸ್‌ಐ ಸಂಸ್ಥೆಯು ಈ ಆಸ್ಪತ್ರೆಯ ನಿರ್ವಹಣೆ ಮಾಡಲಿದೆ ಎಂದು ಹೇಳಿದರು.