ಬೆಂಗಳೂರು: ನಟಿ ಅಮೂಲ್ಯ ಸೇರಿದಂತೆ ಅವರ ಮಾವ ಮಾಜಿ ಕಾರ್ಪೋರೇಟರ್ ಜಿ.ಎಚ್.ರಾಮಚಂದ್ರ ಹಾಗೂ ಪತಿ ಜಗದೀಶ್ ಅವರು ಬಿಜೆಪಿ ರಾಜ್ಯ ಉಸ್ತುವಾರಿ ಸಿ.ಟಿ.ರವಿ ಸಮ್ಮುಖದಲ್ಲಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ಅಮೂಲ್ಯ ಬಿಜೆಪಿ ಸೇರ್ಪಡೆ ವೇಳೆ ಆರ್ ಆರ್ ನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಕೂಡಾ ಹಾಜರಿದ್ದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಆರ್ ಆರ್ ನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದ ಜಿ.ಎಚ್.ರಾಮಚಂದ್ರ ಅವರ ಪರ ಸೊಸೆ ಅಮೂಲ್ಯ ಬೀದಿಗಿಳಿದು ಪ್ರಚಾರ ನಡೆಸಿದ್ದರು.
ಆದರೆ ಜಿ.ಎಚ್.ರಾಮಚಂದ್ರ ಅವರು ಸೋತ ಬಳಿಕ ಪಕ್ಷದ ಚಟುವಟಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಸೊಸೆ ಜೊತೆ ಅವರು ಕೂಡ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಮವೆಯ ಬಳಿಕ ಸಿನಿಮಾದಿಂದ ದೂರ ಉಳಿದಿರುವ ಅಮೂಲ್ಯ ಪತಿ ಜಗದೀಶ್ ಹಾಗೂ ಮಾವ ರಾಮಚಂದ್ರ ಅವರ ಜೊತೆ ಸೇರಿ ಆರ್.ಆರ್.
ನಗರದ ಸಮಾಜ ಸೇವೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಅಶಕ್ತರು,ಮಕ್ಕಳಿಗೆ ಅಗತ್ಯ ವಸ್ತುಗಳ ಪೊರೈಕೆ ಸೇರಿದಂತೆ ಹಲವು ರೀತಿಯ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಅಮೂಲ್ಯ ಪೂರ್ಣ ಪ್ರಮಾಣದ ರಾಜಕೀಯದಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದ್ದು ಅದಕ್ಕಾಗಿ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಧ್ಯದಲ್ಲೇ ಅಮೂಲ್ಯ ಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ನೀಡೋದಾಗಿ ಸಿ.ಟಿ.ರವಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ