ಬೆಂಗಳೂರು – ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಹಸನದ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಕಸರತ್ತು ಶುರುವಾಗಿದೆ. ಪ್ರಮುಖ ಖಾತೆಗಳಿಗೆ ಪ್ರಭಾವಿ ಸಚಿವರಿಂದ ಲಾಬಿ ನಡೆಯುತ್ತಿದ್ದು, ಕೆಲವರ ಖಾತೆಯೂ ಅದಲು ಬದಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ನಾಳೆ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡುವುದಾಗಿ ಸಿಎಂ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಖಾತೆ ಹಂಚಿಕೆ ಜೊತೆಗೆ ಸಣ್ಣ ಪ್ರಮಾಣದಲ್ಲಿ ಸಂಪುಟ ಪುನಾರಚನೆಯು ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಕೆಲ ಸಚಿವರು ಪ್ರಮುಖ ಖಾತೆಗೆ ಪಟ್ಟು ಹಿಡಿದಿರುವುದೇ ಇದಕ್ಕೆ ಕಾರಣ. ಪ್ರಮುಖವಾಗಿ ಈ ಖಾತೆಗಳಿಗೆ ಕೆಲವರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಪ್ರಮುಖ ಖಾತೆಗಳಿಗೆ ಬೇಡಿಕೆ ಇರಿಸಿದ್ದಾರೆ.
ಹೀಗಾಗಿ ನಾಳೆ ಹಿರಿಯ ಸಚಿವರ ಜೊತೆ ಸಿಎಂ ಸಭೆ ನಡೆಸಲಿದ್ದು ನಂತರ ಖಾತೆ ಹಂಚಿಕೆ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಟೆಕೆಟ್ ನೀಡಲಾಗುವುದು ಎಂದು ಹೇಳಲಾಗುತ್ತಿದೆ.ಆದರೆ ತಾವು ಚುನಾವಣೆಯಲ್ಲಿ ಸ್ರ್ಪಸುವುದಿಲ್ಲ, ಈ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ ಎಂದು ಶೆಟ್ಟರ್ ಹೇಳಿದ್ದಾರೆ.
ಸಂಪುಟ ಪುನಾರಚನೆ ವೇಳೆ ಸಿಎಂ ತಮ್ಮ ಬಳಿ ಮತ್ತು ಇತರ ಸಚಿವರ ಬಳಿಯಿರುವ ಹೆಚ್ಚುವರಿ ಖಾತೆಗಳನ್ನು ನೂತನ ಸಚಿವರಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ, ಆದರೆ ಹೊಸದಾಗಿ ಪ್ರಮಾಣ ಸ್ವೀಕರಿಸಿರುವ ಸಚಿವರು ಮಹತ್ವದ ಖಾತೆಗಳ ಮೇಲೆ ಕಣ್ಣಿರಿಸಿದ್ದಾರೆ. ಹೀಗಾಗಿ ಹೊಸಬರು ಮತ್ತು ಹಳಬರ ನಡುವೆ ಸಮತೋಲನ ಸಾಸುವ ಅನಿವಾರ್ಯತೆ ಬಿಎಸ್‍ವೈಗೆ ಎದುರಾಗಿದೆ ಎನ್ನಲಾಗುತ್ತಿದೆ.
ಈ ಮೊದಲು ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದಾರೆ. ಜೊತೆಗೆ ಬೆಳಗಾವಿ ಉಸ್ತುವರಿ ಸಚಿವರೂ ಆಗಿದ್ದರು. ಸುರೇಶ್ ಅಂಗಡಿ ಬೀಗರಾಗಿರುವ ಶೆಟ್ಟರ್ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿದ್ದು, ಅವರನ್ನು ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಕಣಕ್ಕಿಳಿಸಲು ರಾಜ್ಯ ಮತ್ತು ಕೇಂದ್ರ ನಾಯಕರು ಒಲವು ತೋರಿದ್ದಾರೆ.
ಕಂದಾಯ ಸಚಿವ ಆರ್ .ಅಶೋಕ್ ಮತ್ತು ಮುರುಗೇಶ್ ನಿರಾಣಿ ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಇಂಧನ ಖಾತೆಗೆ ಉಮೇಶ್ ಕತ್ತಿ, ನಗರಾಭಿವೃದ್ಧಿ ಇಲಾಖೆಗೆ ಲಿಂಬಾವಳಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಜಲ ಸಂಪನ್ಮೂ ಖಾತೆಗಾಗಿ ಲಾಬಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಬಳಿ 10ಕ್ಕೂ ಹೆಚ್ಚಿನ ಖಾತೆಗಳಿವೆ. ಹಣಕಾಸು, ಗುಪ್ತಚರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸೇರಿ ಕೆಲ ಮಹತ್ವದ ಖಾತೆ ಹೊರತುಪಡಿಸಿ ಇತರ ಖಾತೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಡಿಸಿಎಂ ಅಶ್ವತ್ಥನಾರಾಯಣ ಬಳಿಯಲ್ಲಿಯೂ ಐದಕ್ಕಿಂತ ಹೆಚ್ಚಿನ ಖಾತೆ ಇದ್ದು, ಅದರಲ್ಲಿಯೂ ಹಂಚಿಕೆ ಮಾಡಲಾಗುತ್ತದೆ ಎನ್ನಲಾಗಿದೆ.
ಇನ್ನು ನೂತನ ಸಚಿವರ ಖಾತೆ ಬೇಡಿಕೆಯಿಂದ ಹಳೆಯ ಸಚಿವರು ತಮ್ಮ ಖಾತೆ ಉಳಿಸಿಕೊಳ್ಳಲು ಸರ್ಕಸ್ ನಡೆಸಬೇಕಾಗಿದೆ. ಕಳೆದ ಬಾರಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ನಿರ್ವಹಿಸಿದ್ದ ಮುರುಗೇಶ್ ನಿರಾಣಿ ಈ ಬಾರಿಯೂ ಅದೇ ಖಾತೆಗೆ ಬೇಡಿಕೆ ಇರಿಸಿದ್ದಾರೆ. ಹೀಗಾಗಿ ಹಾಲಿ ಕೈಗಾರಿಕಾ ಸಚಿವರಾಗಿರುವ ಜಗದೀಶ್ ಶೆಟ್ಟರ್ ಖಾತೆ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ.
ನೂತನ ಸಚಿವ ಸಿ.ಪಿ ಯೋಗೇಶ್ವರ್ ಅರಣ್ಯ ಖಾತೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಅರಣ್ಯ ಖಾತೆ ನಿರ್ವಹಿಸಿದ್ದ ಅನುಭವದ ಆಧಾರದಲ್ಲಿ ಅದೇ ಇಲಾಖೆಗೆ ಮನವಿ ಮಾಡಿದ್ದಾರೆ. ಇದರಿಂದಾಗಿ ಅರಣ್ಯ ಸಚಿವ ಆನಂದ್ ಸಿಂಗ್ ಖಾತೆ ಉಳಿಸಿಕೊಳ್ಳಲು ಸರ್ಕಸ್ ಮಾಡಬೇಕಾದ ಸನ್ನಿವೇಶ ಎದುರಾಗಿದೆ.