ಬೆಳಗಾವಿ: ‘ಅಂಗಡಿ ಕುಂಟುಂಬದವರಿಗೆ ನ್ಯಾಯ ಒದಗಿಸದ ಬಿಜೆಪಿ ಸರ್ಕಾರ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿರುಗೇಟು ನೀಡಿದರು.
ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸುರೇಶ ಅಂಗಡಿ ನಿಧನದ ವಿಷಯದಲ್ಲಿ ಅವರೇ ರಾಜಕೀಯ ಮಾಡುತ್ತಿದ್ದಾರೆ. ಕೋವಿಡ್-19 ಮಾರ್ಗಸೂಚಿ ಪ್ರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದಂತೆ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲಾಗಲಿಲ್ಲ. ಎಷ್ಟೇ ದೊಡ್ಡವರಿದ್ದರೂ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎನ್ನುವುದು ಪಕ್ಷದ ನಿಲುವಾಗಿದೆ. ಡಿಕೆಶಿ ಕೀಳು ಮಟ್ಟದ ರಾಜಕಾರಣ ಮಾಡುವುದು ಬಿಡಲಿ’ ಎಂದು ಪ್ರತ್ಯುತ್ತರ ನೀಡಿದರು.
‘ರಾಜ್ಯದ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಲಿ.
ಜನರ ದಿಕ್ಕು ತಪ್ಪಿಸಲು ಹಾಗೂ ಹತಾಶೆಯಿಂದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ಬದಲಿಗೆ ಅವರ ಪಕ್ಷದ ಬಗ್ಗೆ ನೋಡಿಕೊಳ್ಳಲಿ’ ಎಂದು ಹೇಳಿದರು.
‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಹೈಕಮಾಂಡ್ ನಿರ್ಧಾರದಂತೆ ನಡೆದುಕೊಳ್ಳುತ್ತೇವೆ. ಸಿದ್ಧಾಂತ ಮುಖ್ಯವಾಗುತ್ತದೆ. ಯಾರಿಗೆ ಟಿಕೆಟ್ ಕೊಡಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.