ಕೊಪ್ಪಳ: ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಗಂಡ ತನ್ನ ಹೆಂಡತಿಯನ್ನೇ ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ. ಮೊಬೈಲ್ ಚಾರ್ಜರ್ ಬಳಸಿ ಮಡದಿ ಮಂಜುಳಾ (25) ಕತ್ತು ಬಿಗಿದು ಮಂಜುನಾಥ್ ಕಟ್ಟಿಮನಿ ಎಂಬಾತ ಹೆಂಡತಿಯನ್ನು ಕೊಲೆ ಮಾಡಿದ್ದಾನೆ.
ಮಂಜುಳಾ ಪತಿ ಮಂಜುನಾಥ್ ಕಟ್ಟಿಮನಿ ಬೇರೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದೇ ವಿಷಯಕ್ಕೆ ಗಂಡ ಹೆಂಡತಿ ಮದ್ಯೆ ಪದೇ ಪದೇ ಗಲಾಟೆ ಆಗ್ತಿತ್ತು ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿಯೂ ಇದೇ ವಿಷಯಕ್ಕೆ ಇಬ್ಬರ ಮದ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ಹೋಗಿ ಗಂಡ ತನ್ನ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ.
ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಯಡ್ಡೋಣಿ ನಿವಾಸಿಯಾಗಿರೋ ಮಂಜುಳಾ, ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯ ಮಂಜುನಾಥ್ ಜೊತೆಗೆ ಆರು ವರ್ಷದ ಹಿಂದೆ ವಿವಾಹವಾಗಿದ್ದರು. ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತರುವ ಮಂಜುಳಾ, ಮಂಜುನಾಥ್ ಬೇರೊಂದು ಹುಡಗಿಯೊಂದಿಗೆ ಸಲುಗೆಯಿಂದ ಇರೋದನ್ನ ಕಂಡು ಆಗಾಗ ಜಗಳವಾಡುತ್ತಿದ್ದಳು.
ಇದರಿಂದ ಸಿಟ್ಟಾದ ಗಂಡ ವಾಕಿಂಗ್ ಹೋಗುವ ನೆಪದಲ್ಲಿ ಕುಷ್ಟಗಿ ಹೊರವಲಯದ ಬಳಿ ಕರೆದುಕೊಂಡು ಹೋಗಿ ಮಡದಿಯ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಮಂಜುನಾಥ್ ಸದ್ಯ ಕುಷ್ಟಗಿ ಪೊಲೀಸರ ವಶದಲ್ಲಿದ್ದಾನೆ. ಕೊಪ್ಪಳ ಜಿಲ್ಲೆ ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.