ಬೆಂಗಳೂರು, – ಇಂದಿನಿಂದ ರಾಜ್ಯಾದ್ಯಂತ ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಆರಂಭಿಸಲಾಗಿದೆ. ಆದರೆ ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯೇ ಇತ್ತು. ಸೋಂಕಿನ ಭೀತಿಯ ಮಧ್ಯೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕಾಲೇಜುಗಳನ್ನು ಆರಂಭ ಮಾಡಲಾಗಿದೆ. ಕಾಲೇಜುಗಳು ಆರಂಭವಾಗಿದ್ದರೂ, ವಿದ್ಯಾರ್ಥಿಗಳ ಹಾಜರಾತಿ ಅನೇಕ ಕಡೆಗಳಲ್ಲಿ ಶೇಕಡಾ 50 ರಿಂದ 70 ರಷ್ಟು ದಾಖಲಾಗಿದೆ.
ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಮತ್ತು ತರಗತಿಗೆ ಹಾಜರಾಗಲು ಬಯಸದ ಮಂದಿ ಆನ್‌ಲೈನ್‌ನಲ್ಲಿ ತರಗತಿಗಳಿಗೆ ಪಾಲ್ಗೊಳ್ಳುವ ಅವಕಾಶ ನೀಡಲಾಗಿದೆ.
ಪದವಿ, ಸ್ನಾತಕೋತ್ತರ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಭೌತಿಕ ತರಗತಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮೊದಲ ಡೋಸ್ ಲಸಿಕೆ ಪಡೆದಿರಬೇಕು, ಕಾಲೇಜಿನ ಪ್ರವೇಶ ದ್ವಾರದ ಬಳಿಯೇ ವಿದ್ಯಾರ್ಥಿಗಳು ಲಸಿಕಾ ಪ್ರಮಾಣಪತ್ರ ಪರಿಶೀಲಿಸಿದ ನಂತರ ಅವರನ್ನು ಒಳಗೆ ಬಿಡಲಾಗುತ್ತಿತ್ತು.
ಹೊರರಾಜ್ಯದಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬರುವ 72 ಗಂಟೆಯ ಮೊದಲು ಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಂಡಿರಬೇಕು. ಈ ಸಂಬಂಧ ವಿಶ್ವವಿದ್ಯಾಲಯ ಮಾರ್ಗಸೂಚಿ ಹೊರಡಿಸಿದೆ. ಮಾರ್ಗಸೂಚಿಗಳನ್ನು ಎಲ್ಲಾ ಕಾಲೇಜುಗಳು ತಪ್ಪದೇ ಪಾಲಿಸುವಂತೆ ಸೂಚಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರು ಎಲ್ಲಾ ಕಾಲೇಜುಗಳು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸ್ ಮಾಡುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಪ್ರತಿದಿನವೂ ಕೊಠಡಿಗಳನ್ನು ಶುಚಿಯಾಗಿಟ್ಟುಕೊಳ್ಳುವುದು, ಜೊತೆಗೆ ವಿದ್ಯಾರ್ಥಿಗಳು ಲಸಿಕೆ ಪಡೆಯುವಂತೆ, ಅಗತ್ಯ ಕ್ರಮ ಕೈಗೊಳ್ಳುವಂತೆ, ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ಭೌತಿಕ ತರಗತಿ ಇಲ್ಲವೇ ಆನ್‌ಲೈನ್ ತರಗತಿ ಎರಡರಲ್ಲಿ ಒಂದು ಪಾಲ್ಗೊಳ್ಳುವುದು ಕಡ್ಡಾಯ ಎಂದು ಅವರು ಹೇಳಿದ್ದಾರೆ.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಲಸಿಕೆ ನೀಡುವ ವೇಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದುವರೆಗೂ ಶೇ. ೭೪ ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೂ ಲಸಿಕೆ ಹಾಕಲಾಗುವುದು ಎಂದು ಅವರು ತಿಳಿಸಿದ್ದಾರೆ.
Laxmi News 24×7