ಚಿಕ್ಕಮಗಳೂರು: ಕೊರೊನಾ ಮಹಾಮಾರಿಯಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ರುದ್ರ-ರಮಣೀಯ ತಾಣ ದೇವರಮನೆ ಗುಡ್ಡಕ್ಕೆ ತಾತ್ಕಾಲಿಕವಾಗಿ ಪ್ರವಾಸಿಗರನ್ನ ಸಂಪೂರ್ಣ ನಿಷೇಧಿಸಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ರುದ್ರ-ರಮಣೀಯ ತಾಣ ದೇವರಮನೆ ಗುಡ್ಡದ ಸೌಂದರ್ಯ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿತ್ತು. ಲಾಕ್‍ಡೌನ್ ಸಡಿಲವಾಗುತ್ತಿದ್ದಂತೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಜನಜಾತ್ರೆ ಏರ್ಪಡುತ್ತಿತ್ತು. ಅದರಲ್ಲೂ ಮೂಡಿಗೆರೆ ತಾಲೂಕಿನ ದೇವರಮನೆ ಗುಡ್ಡಕ್ಕೆ ಭಾರೀ ಪ್ರವಾಸಿಗರು ಭೇಟಿ ಕೊಡುತ್ತಿದ್ದರು.
ದೇವರಮನೆ ಗುಡ್ಡಕ್ಕೆ ಬರುತ್ತಿದ್ದ ಪ್ರವಾಸಿಗರು ಎಲ್ಲೆಂದರಲ್ಲಿ ಮಧ್ಯದ ಬಾಟಲಿ ಹಾಗೂ ಪ್ಲಾಸ್ಟಿಕ್, ಪ್ಲಾಸ್ಟಿಕ್ ಬಾಟಲಿ ಎಸೆಯುತ್ತಿದ್ದರು. ಪ್ರಶ್ನೆ ಮಾಡಿದ ಸ್ಥಳೀಯರ ವಿರುದ್ಧವೇ ಜಗಳ ಮಾಡುತ್ತಿದ್ದರು. ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಯಾವುದು ಇಲ್ಲದೆ ಎಲ್ಲೆಂದರಲ್ಲಿ ಕಾರು ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡುತ್ತಿದ್ದರು. ಪ್ರವಾಸಿಗರ ಈ ವರ್ತನೆ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಇದೀಗ ಜಿಲ್ಲಾಡಳಿತ ದೇವರಮನೆ ಗುಡ್ಡಕ್ಕೆ ತಾತ್ಕಾಲಿಕವಾಗಿ ಪ್ರವಾಸಿಗರನ್ನ ಸಂಪೂರ್ಣ ನಿಷೇಧಿಸಿದೆ.
ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಒಂದೂ ಕೊರೊನಾ ಪ್ರಕರಣಗಳಿರದ ಕಾಫಿನಾಡಲ್ಲಿ 40 ದಿನಕ್ಕೆ ಸೋಂಕಿತರ ಸಂಖ್ಯೆ ಎರಡು ಸಾವು ಸೇರಿದಂತೆ 82 ಗಡಿ ಮುಟ್ಟಿತ್ತು. ಇದು ಜಿಲ್ಲೆಯ ಜನರನ್ನ ಮತ್ತಷ್ಟು ಆತಂಕಕ್ಕೀಡು ಮಾಡಿತ್ತು. ಉಡುಪಿ-ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಬರುತ್ತಿದ್ದ ಪ್ರವಾಸಿಗರ ಕಂಡು ಸ್ಥಳೀಯರು ಪ್ರವಾಸಿಗರು ಬರದಂತೆ ನಿರ್ಬಂಧ ಹೇರುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು.
ಕೆಲ ಸ್ಥಳೀಯ ಯುವಕರೇ ಪ್ರವಾಸಿಗರಿಗೆ ಬರಬೇಡಿ ಎಂದು ಮನವಿ ಮಾಡಿದ್ದರು. ಕೆಲವರು ಗ್ರಾಮಪಂಚಾಯಿತಿಗೆ ಪ್ರತಿಭಟನೆ ನಡೆಸಿ ಮನವಿ ಮಾಡಿಕೊಂಡಿದ್ದರು. ಆದರೂ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದರು. ಇದರಿಂದ ಸ್ಥಳೀಯರ ಆತಂಕ ಕೂಡ ಹೆಚ್ಚಾಗಿತ್ತು. ಇದೀಗ ಸ್ಥಳೀಯರ ರಕ್ಷಣೆಯ ದೃಷ್ಠಿಯಿಂದ ಜಿಲ್ಲಾಡಳಿತ ದೇವರಮನೆ ಗುಡ್ಡಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿಷೇಧ ಹೇರಿದೆ. ಕಳೆದ ಎರಡು ದಿನಗಳ ಹಿಂದಷ್ಟೆ ಜಿಲ್ಲಾಡಳಿತ ಪ್ರವಾಸಿಗರಿಗೆ ಜಿಲ್ಲೆಗೆ ಬರುವುದನ್ನ ತಾತ್ಕಾಲಿಕವಾಗಿ ಮುಂದೂಡಿ ಅಥವಾ ರದ್ದು ಮಾಡಿ ಎಂದು ಮನವಿ ಮಾಡಿತ್ತು.