ಬೆಂಗಳೂರು: ಯಡಿಯೂರಪ್ಪ ಅವರ ಹೆಸರು, ಅಧಿಕಾರ ಎಲ್ಲವೂ ಪುತ್ರ ವಿಜಯೇಂದ್ರನಿಂದ ಹಾಳಾಯಿತು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಸೋಮವಾರ ಸಿಎಂ ರಾಜೀನಾಮೆ ಬಳಿಕ ಮಾತನಾಡಿದ ಅವರು, ಯಡಿಯೂರಪ್ಪ ಅವರ ಬಗ್ಗೆ ಗೌರವ ಇದೆ. ವಿಜಯೇಂದ್ರ ಹಾಗೂ ಮೊಮ್ಮಕ್ಕಳು ಎಲ್ಲವನ್ನೂ ಹಾಳು ಮಾಡಿಬಿಟ್ಟರು. ಯಡಿಯೂರಪ್ಪ ಹೆಸರು, ಅಧಿಕಾರ, ರಾಜ್ಯದ ಅಭಿವೃದ್ಧಿ ಎಲ್ಲವೂ ಅವರ ಮಗನಿಂದ ಹಾಳಾಯಿತು. ಭ್ರಷ್ಟಾಚಾರದಿಂದಾಗಿಯೇ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು. ಭ್ರಷ್ಟಾಚಾರಕ್ಕೆ ಅವರ ಮನೆಯೇ ಮೂಲವಾಯಿತು. ಅದಕ್ಕೆ ವಿಜಯೇಂದ್ರ ಕೊಡಲಿ ಪೆಟ್ಟು ನೀಡಿದ. ವಿಜಯದ ಪತಾಕೆಯಲ್ಲಿದ್ದ ಯಡಿಯೂರಪ್ಪರನ್ನು ಅವರ ಮಗ ಮುಗಿಸಿದ. ಎಲ್ಲಾ ದುರಂತಕ್ಕೂ ವಿಜಯೇಂದ್ರ ಕಾರಣ ಎಂದು ದೂರಿದರು.
ರಾಜೀನಾಮೆ ನಿರೀಕ್ಷಿತವಾದದ್ದು. ಆದರೆ, ವಿಜಯೇಂದ್ರ ಅವರು ಸ್ಟೇಜ್ ಸೆಟ್ ಮಾಡುತ್ತಿದ್ದರು. ಸ್ವಾಮೀಜಿಗಳನ್ನು ಕರೆತರುವುದು, ಶಾಸಕರು-ಸಚಿವರಿಂದ ಹೇಳಿಕೆ ನೀಡಿಸುವುದು ಎಲ್ಲವನ್ನೂ ವಿಜಯೇಂದ್ರ ಮಾಡಿದರು. ಇದೆಲ್ಲ ಮಾಡಬಾರದಿತ್ತು. ಸ್ವತಃ ಯಡಿಯೂರಪ್ಪ ಅವರೇ ನಿರ್ಧಾರ ತೆಗೆದುಕೊಂಡಿದ್ದರು ಎಂದು ತಿಳಿಸಿದರು.
ಪಕ್ಷಕ್ಕೆ ಯಾರೂ ಅನಿವಾರ್ಯ ಅಲ್ಲ. ಯಡಿಯೂರಪ್ಪ ಅವರು ಎಲ್ಲರೊಡಗೂಡಿ ಪಕ್ಷ ಕಟ್ಟಿದ್ದು ಸುಳ್ಳಲ್ಲ. ಅವರ ಬಗ್ಗೆ ಇವತ್ತಿಗೂ ಗೌರವ ಇದೆ. ಆದರೆ, ಪಕ್ಷವನ್ನು ಯಡಿಯೂರಪ್ಪ ಒಬ್ಬರೇ ಕಟ್ಟಿದ್ದಲ್ಲ. ಅವರು ಬರುವ ಮುನ್ನ ಎ.ಕೆ.ಸುಬ್ಬಯ್ಯ, ಡಿ.ಬಿ.ಶಿವಪ್ಪ, ಈಶ್ವರಪ್ಪ, ಶಂಕರಮೂರ್ತಿ ಅವರೆಲ್ಲ ಸೇರಿ ಪಕ್ಷ ಕಟ್ಟಿದರು. ಬಿಜೆಪಿಗೆ ಕಾರ್ಯಕರ್ತರ ಪಡೆಯೇ ಇದೆ. ಯಡಿಯೂರಪ್ಪ ಅವರಿಗೆ ಪಕ್ಷದ ಋಣವಿದೆ. ನಾಲ್ಕು ಬಾರಿ ಸಿಎಂ ಆಗಲು ಅವಕಾಶ ಕೊಟ್ಟಿದೆ. ಮುಂದೆಯೂ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರ ಜೊತೆಗೂಡಿ ಅವರು ಕೆಲಸ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.