ಬೆಂಗಳೂರು: ಹೆಮ್ಮಾರಿ ಕೊರೊನಾದಿಂದ ಈಗಾಗಲೇ ಅನೇಕ ನಟರು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೀಗ ಸ್ಯಾಂಡಲ್‍ವುಡ್‍ನ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ತಮ್ಮ ಹುಟ್ಟುಹಬ್ಬಕ್ಕೂ ಮುನ್ನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದೇ ತಿಂಗಳ 12ರಂದು ಶಿವಣ್ಣ ಅವರ ಹುಟ್ಟುಹಬ್ಬವಿದೆ. ಪ್ರತಿ ವರ್ಷ ಸಾವಿರಾರು ಅಭಿಮಾನಿಗಳು ಶಿವಣ್ಣ ಅವರ ಮುಂದೆ ಜಮಾಯಿಸುತ್ತಿದ್ದರು. ಹೂವಿನ ಹಾರ, ಕೇಕ್ ತಂದು ಸಂಭ್ರಮಿಸುತ್ತಿದ್ದರು. ಆದರೆ ಈ ಕೊರೊನಾದಿಂದ ಯಾವುದೇ ಸಂಭ್ರಮಕ್ಕೂ ಅವಕಾಶವಿಲ್ಲ. ಹೀಗಾಗಿ ಈ ಬಾರಿ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳದಿರಲು ನಿರ್ಧಾರಿಸಿದ್ದಾರೆ.

ನಟ ಶಿವರಾಜ್‍ಕುಮಾರ್ ಈ ಬಗ್ಗೆ ಇನ್ಸ್‌ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದು, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. “ಎಲ್ಲರಿಗೂ ನಮಸ್ಕಾರ, ನೀವೆಲ್ಲರೂ ಆರೋಗ್ಯವಾಗಿ ಚೆನ್ನಾಗಿದ್ದೀರಿ ಎಂದುಕೊಂಡಿದ್ದೇನೆ. ನಾನು ಕೂಡ ಆರೋಗ್ಯವಾಗಿದ್ದೀನಿ, ನೀವು ಚೆನ್ನಾಗಿರಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಈ ತಿಂಗಳು ನನ್ನ ಹುಟ್ಟುಹಬ್ಬವಿದೆ. ಆದರೆ ಆ ದಿನ ನಾನು ಮನೆಯಲ್ಲಿ ಇರಲ್ಲ. ಯಾಕೆಂದರೆ ಇಂತಹ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ” ಎಂದು ತಿಳಿಸಿದ್ದಾರೆ.

ಹುಟ್ಟುಹಬ್ಬದ ದಿನ ನೀವೆಲ್ಲರೂ ಮನೆಯ ಬಳಿ ಬಂದರೆ ಸಾಮಾಜಿಕ ಅಂತರ ಕಾಪಾಡಲು ಕಷ್ಟವಾಗುತ್ತದೆ. ಇದರಿಂದ ನಿಮ್ಮೆಲ್ಲರಿಗೂ ನೋವಾಗುತ್ತದೆ ಎಂದು ನನಗೆ ಗೊತ್ತು. ನನಗೂ ಅಷ್ಟೆ ನೋವಾಗುತ್ತೆ. ಆದರೆ ಈ ಹುಟ್ಟುಹಬ್ಬದಲ್ಲಿ ನನ್ನ ಆರೋಗ್ಯಕ್ಕಿಂತ ನಿಮ್ಮ ಆರೋಗ್ಯ ನನಗೆ ತುಂಬಾ ಮುಖ್ಯ. ಹೀಗಾಗಿ ನೀವೆಲ್ಲರೂ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಲಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು.

“ಈ ಕೊರೊನಾ ಮುಗಿದ ಮೇಲೆ ನಾವೆಲ್ಲರೂ ಒಂದು ಕಡೆ ಭೇಟಿ ಮಾಡೋಣ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು. ಮತ್ತೊಂದು ವಿಚಾರ ಯಾರೂ ಕೂಡ ಈ ಕೊರೊನಾಗೆ ಭಯಪಡುವಂತ ಅವಶ್ಯಕತೆ ಇಲ್ಲ. ಎಲ್ಲರೂ ಧೈರ್ಯವಾಗಿ ಇರಬೇಕು. ಈ ಕೊರೊನಾ ಹೋಗಲು ಸಾಮಾಜಿಕ ಅಂತರ ಕಾಪಾಡಿ, ನಿಯಮಗಳನ್ನು ಪಾಲಿಸಿ. ನಮ್ಮೆಲ್ಲರನ್ನೂ ಕಾಪಾಡಲು ಆ ದೇವರು ಇದ್ದಾನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರುತ್ತದೆ ಎಂಬ ನಂಬಿಕೆ ಇದೆ. ಧೈರ್ಯವಾಗಿರಿ, ಸುರಕ್ಷಿತವಾಗಿರಿ” ಎಂದು ಅಭಿಮಾನಿಗಳಿಗೆ ಶಿವಣ್ಣ ಧೈರ್ಯ ತುಂಬಿದರು.
Laxmi News 24×7