ಗದಗ: ಆತ 12 ವರ್ಷಗಳಿಂದ ಸೈನಿಕನಾಗಿ ದೇಶ ಕಾಯ್ತಿದ್ದ. ಒಂದು ತಿಂಗಳ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದ. ಬಳಿಕ ಮೇಲಾಧಿಕಾರಿಗಳ ಕರೆ ಮೇಲೆ ಮತ್ತೆ ಸೇವೆಗೆ ಹಾಜರಾದ. ಆದ್ರೆ ಬೆಳಿಗ್ಗೆ ಅಪ್ಪ ಅಮ್ಮನ ಜೊತೆಗೆ ಖುಷಿ ಖುಷಿಯಾಗಿ ಮಾತನಾಡಿದ್ದ ಯೋಧ ಮಾತನಾಡಿದ ಒಂದೇ ಗಂಟೆಯಲ್ಲಿ ಯೋಧನ ಹುತಾತ್ಮನಾದ ಸುದ್ದಿ ಬರಸಿಡಿಲಂತೆ ಬಡಿದಿದೆ.
ಇಂದು ಛತ್ತೀಸ್ಘಡದಲ್ಲಿ ಗದಗ ಮೂಲದ ಯೋಧ ಹುತಾತ್ಮನಾಗಿರೋ ಸುದ್ದಿ ತಿಳಿದು ಗೊಜನೂರು ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಇಂದು ಬೆಳಿಗಿನ ಜಾವ 11 ಗಂಟೆ ಸುಮಾರಿಗೆ ಯೋಧ ಲಕ್ಷ್ಮಣ್ಣ ಗೌರಣ್ಣವರ್ (30) ಗೆ ಗುಂಡು ಬಿದ್ದಿದೆ. ವಿಷಯ ತಿಳಿದ ಪೋಷಕರಿಗೆ ದಿಗಿಲು ಬಡಿದಿದೆ. ಯೋಧನ ತಂದೆ ತಾಯಿಗೆ ಛತ್ತೀಸ್ಘಡದ ಯೋಧರಿಂದ ಮಾಹಿತಿ ತಿಳಿದಿದ್ದು ಸಾವಿನ ಕುರಿತು ನಿಖರ ಮಾಹಿತಿ ಪೋಷಕರಿಗಿಲ್ಲ. ಆದ್ರೆ ಮಗ ಮೃತನಾಗಿದ್ದಾನೆ ಅಂತ ತಿಳಿದ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.
ಇನ್ನು ಈ ಬಗ್ಗೆ ಜಿಲ್ಲಾಡಳಿತಕ್ಕೆ ಅಧಿಕೃತ ಮಾಹಿತಿ ಬಂದಿಲ್ಲ. ಕೇವಲ ಪೋಷಕರಿಗೆ ಮಾತ್ರ ವಿಷಯ ತಿಳಿದಿದ್ದು ಕುಟುಂಬದವರಿಂದ ಪ್ರಾಥಮಿಕ ಮಾಹಿತಿ ಕಲೆಹಾಕುತ್ತಿದ್ದಾರೆ. ಇನ್ನು ಯೋಧ ಕಳೆದ 15 ದಿನಗಳ ಹಿಂದೆಯಷ್ಟೇ ರಜೆ ಮೇಲೆ ಊರಿಗೆ ಬಂದಿದ್ದ. ಅನಾರೋಗ್ಯದ ಹಿನ್ನೆಲೆಯಲ್ಲಿ ಊರಲ್ಲಿ ರಜೆ ಕಳೆದು ಮರಳಿ ಸೇವೆಗೆ ಹಾಜರಾಗಿದ್ದ. ಆದ್ರೆ ಈಗ ದಿಢೀರ್ ಮಗನ ಸಾವು ತಾಯಿಗೆ ಸಹಿಸಿಕೊಳ್ಳಲಾಗ್ತಿಲ್ಲ.
ಇನ್ನು ಯೋಧನಿಗೆ ಪತ್ನಿ ಮತ್ತು ಮೂರು ಚಿಕ್ಕ ಮಕ್ಕಳಿದ್ದಾರೆ. ತಂದೆ ತಾಯಿ ಮತ್ತು ಇಬ್ಬರು ತಮ್ಮಂದಿರಿದ್ದಾರೆ. ರಜೆ ಮೇಲೆ ಬಂದಾಗ ತಮ್ಮಂದಿರಿಗೆ ಕನ್ಯೆ ನೋಡಿ ಫಿಕ್ಷ್ ಮಾಡಿ ಹೋಗಿದ್ದ. ಮತ್ತೆ ರಜೆ ಮೇಲೆ ಮರಳಿ ಊರಿಗೆ ಬಂದು ತಮ್ಮಂದಿರ ಮದುವೆ ಮಾಡ್ತೀನಿ ಎಂದಿದ್ದನಂತೆ. ಇಡೀ ಮನೆ ಯೋಧ ಲಕ್ಷ್ಮಣನ ಮೇಲೆ ಅವಲಂಬಿತವಾಗಿತ್ತು. ಆದ್ರೆ ಈಗ ಯೋಧ ಲಕ್ಷ್ಮಣ ಇಲ್ಲ ಅನ್ನೋದನ್ನ ಅರಗಿಸಿಕೊಳ್ಳಲಾಗ್ತಿಲ್ಲ ತಂದೆ ತಾಯಿ ಎದೆ ಬಡಿದು ಕಣ್ಣೀರು ಹಾಕ್ತಿದ್ದಾರೆ. ನಿನ್ನ ಮಗ ನಿನ್ನಂತೆ ಯೋಧನಾಗಿ ಮನೆಯಲ್ಲಿ ನಟನೆ ಮಾಡ್ತಾನೆ ಮಗನೇ ಅಂತ ದುಃಖಿಸುತ್ತಿದ್ದಾಳೆ
ಇನ್ನು ಯೋಧ ಲಕ್ಷ್ಮಣ ಗೊಜನೂರು ಗ್ರಾಮಕ್ಕೆ ಹೆಮ್ಮೆಯ ಕಳಸವಾಗಿದ್ದ. ಇಡೀ ಗ್ರಾಮದಲ್ಲಿ ಲಕ್ಷ್ಮಣ ಅಂದ್ರೆ ಅಷ್ಟೊಂದು ಗೌರವ ಇತ್ತು. ಸದ್ಯ ಲಕ್ಷ್ಮಣ ಸಾವು ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.