Breaking News

ಕಚ್ಚಾ ತೈಲ ಪೂರೈಕೆ ಹೆಚ್ಚಿಸಲು ಒಪೆಕ್+ ಸಮ್ಮತಿ

Spread the love

ಮಾಸ್ಕೊ/ದುಬೈ/ಲಂಡನ್: ಆಗಸ್ಟ್‌ ತಿಂಗಳಿನಿಂದ ಕಚ್ಚಾ ತೈಲ ಪೂರೈಕೆಯನ್ನು ಹೆಚ್ಚುಮಾಡಲು ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟ (ಒಪೆಕ್) ಮತ್ತು ಆ ಒಕ್ಕೂಟದ ಮಿತ್ರರಾಷ್ಟ್ರಗಳ (ಒಪೆಕ್‌+) ಪ್ರತಿನಿಧಿಗಳು ಸಮ್ಮತಿ ಸೂಚಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕದ ದುಷ್ಪರಿಣಾಮದಿಂದ ವಿಶ್ವದ ಅರ್ಥ ವ್ಯವಸ್ಥೆಯು ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ಎರಡೂವರೆ ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಪೂರೈಕೆ ಜಾಸ್ತಿ ಮಾಡಲು ಒಪ್ಪಿರುವುದರ ಪರಿಣಾಮವಾಗಿ, ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತಗ್ಗಬಹುದು ಎನ್ನಲಾಗಿದೆ.

‘ಒಪ್ಪಂದವು ನಮಗೆ ಸಂತೋಷ ತಂದಿದೆ’ ಎಂದು ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಇಂಧನ ಸಚಿವ ಸುಹೈಲ್ ಮೊಹಮ್ಮದ್ ಅಲ್-ಮಜ್ರೂಯಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಒಪ್ಪಂದಕ್ಕೆ ಬರಲು ಸಾಧ್ಯವಾಗಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಲು ಸೌದಿ ಅರೇಬಿಯಾದ ಇಂಧನ ಸಚಿವ ರಾಜಕುಮಾರ ಅಬ್ದುಲ್‌ಅಜೀಜ್ ಬಿನ್ ಸಲ್ಮಾನ್ ನಿರಾಕರಿಸಿದರು.

ಒಪೆಕ್‌+ ದೇಶಗಳು ಕಳೆದ ವರ್ಷ ಕಚ್ಚಾ ತೈಲ ಉತ್ಪಾದನೆಯನ್ನು ದಿನವೊಂದಕ್ಕೆ 1 ಕೋಟಿ ಬ್ಯಾರೆಲ್‌ನಷ್ಟು ಕಡಿಮೆ ಮಾಡಿದವು. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಬೇಡಿಕೆ ಕುಸಿದು, ಬೆಲೆಯೂ ಭಾರಿ ಪ್ರಮಾಣದಲ್ಲಿ ಇಳಿಕೆ ಆದಾಗ ಅವು ಉತ್ಪಾದನೆ ಕಡಿತದ ಮೊರೆ ಹೋಗಿದ್ದವು. ನಂತರದಲ್ಲಿ ಉತ್ಪಾದನೆಯನ್ನು ತುಸು ಹೆಚ್ಚಿಸಲಾಯಿತು. ಹೀಗಿದ್ದರೂ, ಸಾಮಾನ್ಯ ದಿನಗಳ ಮಟ್ಟಕ್ಕೆ ಹೋಲಿಸಿದರೆ ಕಚ್ಚಾ ತೈಲ ಉತ್ಪಾದನೆಯು ದಿನವೊಂದಕ್ಕೆ 58 ಲಕ್ಷ ಬ್ಯಾರೆಲ್‌ನಷ್ಟು ಕಡಿಮೆ ಇದೆ.

ಆಗಸ್ಟ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಒಪೆಕ್+ ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆಯನ್ನು 20 ಲಕ್ಷ ಬ್ಯಾರೆಲ್‌ನಷ್ಟು ಹೆಚ್ಚಿಸಲಿವೆ. ಅಂದರೆ, ಪ್ರತಿ ತಿಂಗಳು ಆಗಲಿರುವ ಉತ್ಪಾದನೆಯಲ್ಲಿನ ಹೆಚ್ಚಳವು 4 ಲಕ್ಷ ಬ್ಯಾರೆಲ್‌ನಷ್ಟು ಇರಲಿದೆ ಎಂದು ಒಪೆಕ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.


Spread the love

About Laxminews 24x7

Check Also

‘ಪಡಿತರ ಅಕ್ರಮ ತಡೆಗೆ ಅಂಗಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ’: ಗ್ಯಾರಂಟಿ ಅನುಷ್ಠಾನ ಸಮಿತಿ ಸೂಚನೆ

Spread the loveಗಂಗಾವತಿ: “ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಅನ್ನಭಾಗ್ಯ’ ಪಡಿತರ ಫಲಾನುಭವಿಗಳಿಗೆ ತಲುಪದೇ ಬಹುತೇಕ ಧಾನ್ಯ ಕಳ್ಳರ ಪಾಲಾಗುತ್ತಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ