ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬುಧವಾರ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದು, ಈ ಕುರಿತು ಪಾಕಿಸ್ತಾನದ ಟೀಕೆಗೆ ಭಾರತ ಖಡಕ್ ವಾರ್ನಿಂಗ್ ನೀಡಿದೆ.
ದೇಶದ ಆಂತರಿಕ ವಿಚಾರದಲ್ಲಿ ನೀವು ತಲೆ ಹಾಕಬೇಡಿ ಎಂದು ಭಾರತ ಎಚ್ಚರಿಸಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಪ್ರತಿಕ್ರಿಯಿಸಿ, ಭಾರತದ ಆಂತರಿಕ ವಿಷಯದ ಬಗ್ಗೆ ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ’ದ ಪತ್ರಿಕಾ ಹೇಳಿಕೆ ಗಮನಕ್ಕೆ ಬಂದಿದೆ. ಪಾಕಿಸ್ತಾನವು ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು ಹಾಗೂ ಕೋಮು ಪ್ರಚೋದನೆ ನೀಡುವ ಕೆಲಸದಿಂದ ದೂರವಿದ್ದರೆ ಒಳ್ಳೆದು ಎಂದು ಎಚ್ಚರಿಸಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲಿಸುವ, ತನ್ನ ರಾಷ್ಟ್ರದ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸುವ ದೇಶದ ಈ ನಡೆ ಅಚ್ಚರಿಯಲ್ಲ. ಆದರೆ ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಪಾಕ್ ಹೇಳಿಕೆ ನೀಡುವುದು ವಿಷಾದನೀಯ ಎಂದು ಹೇಳಿದ್ದಾರೆ.
ಆಗಸ್ಟ್ 5ರಂದು ಇಡೀ ಭಾರತೀಯರು 500 ವರ್ಷದಿಂದ ಕಾಯುತ್ತಿದ್ದ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆದಿದೆ. ಆದರೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಬುಧವಾರ ರಾಮಮಂದಿರ ದೇವಾಲಯವನ್ನು ನಿರ್ಮಿಸುವುದನ್ನು ಖಂಡಿಸಿದೆ. ಜೊತೆಗೆ ರಾಮಮಂದಿರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ದೋಷಪೂರಿತವಾಗಿದೆ ಎಂದು ಆರೋಪ ಮಾಡಿತ್ತು.