ಮಡಿಕೇರಿ: ಕೊಡಗಿಗೆ ಮತ್ತೆ ಜಲಗಂಡಾಂತರ ಎದುರಾಗಿದೆ. ಎರಡು ವರ್ಷದ ಹಿಂದೆ ಭಾರೀ ಮಳೆಯಿಂದಾಗಿ ನಡೆದಿದ್ದ ಭೂಕುಸಿತ ಮತ್ತೆ ಮರುಕಳಿಸುವಂತ ಲಕ್ಷಣ ದಟ್ಟವಾಗಿದೆ.ಕೊಡಗು ಜಿಲ್ಲೆಯಾದ್ಯಂತ ಎಡಬಿಡೆ ಸುರಿಯತ್ತಿರುವ ಮಳೆ ಇನ್ನೂ ಎರಡು ದಿನಗಳ ಕಾಲ ತನ್ನ ಅಬ್ಬರ ಮುಂದುವರಿಸುವ ಸಾಧ್ಯತೆ ಇದೆ. ಕೊಡಗಿನಲ್ಲಿ ಹಲವು ಗುಡ್ಡಗಳು ಕುಸಿಯುವುದು ಬಹುತೇಕ ಸ್ಪಷ್ಟವಾಗಿದ್ದು, ಎರಡು ದಿನಗಳ ಮಳೆಗೆ 40 ಪ್ರದೇಶದಲ್ಲಿ ಈಗಾಗಲೇ ಗುಡ್ಡ ಕುಸಿತವಾಗಿದೆ. ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಗಳ ಸಂಪರ್ಕ ರಸ್ತೆ ಮುಚ್ಚಿಹೋಗಿವೆ.
ಭಗಂಡೇಶ್ವರ ದೇವಾಲಯದ ಅರ್ಚಕರ ಕುಟುಂಬ ಭೂ ಸಮಾಧಿಯಾಗಿದ್ದು ಬಹುತೇಕ ಅಧಿಕೃತವಾಗಿದ್ದು, ನಾಪತ್ತೆಯಾದ 5 ಮಂದಿ ಮೃತದೇಹಗಳ ಪತ್ತೆಕಾರ್ಯ ನಡೆಸುತ್ತಿದೆ. ಆದರೆ ಈ ಕಾರ್ಯಚರಣೆಗೆ ಎಡಬಿಡದೆ ಸುರಿಯುವ ಮಳೆ ಅಡ್ಡಿಯುಂಟುಮಾಡಿದ್ದು ಎನ್‍ಡಿಆರ್‍ಎಫ್ ರಕ್ಷಣಾ ತಂಡಕ್ಕೆ ಕಾರ್ಯಚರಣೆ ಮಾಡಲು ಸಮಸ್ಯೆ ಎದುರಾಗಿದೆ. ಜಿಲ್ಲೆಯಲ್ಲಿ ಮತ್ತಷ್ಟು ಜಾಗದಲ್ಲಿ ಗುಡ್ಡಗಳು ಬಿರುಕು ಬಿಟ್ಟಿರುವ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದು. ಆ ಗುಡ್ಡಗಾಡು ಪ್ರದೇಶದಲ್ಲಿ ಇರುವ ಜನರನ್ನ ಸ್ಥಳಾಂತರ ಮಾಡಲು ಕಾರ್ಯಚರಣೆಯೂ ಆರಂಭವಾಗಲಿದೆಪ್ರಮುಖವಾಗಿ ಅಯ್ಯಪ್ಪಬೆಟ್ಟ ಹಾಗೂ ಕರಡಿಗೂಡು ಪ್ರದೇಶದಲ್ಲಿ ಗುಡ್ಡ ಬಿರುಕು ಬಿಟ್ಟಿದ್ದು ಅಲ್ಲಿನ ಜನರ ಸ್ಥಳಾಂತರ ಕಾರ್ಯಚರಣೆ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಈ ಜೊತೆಗೆ ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯುತ್ತಿದ್ದು ಕೊರೊನಾ ಆತಂಕ ನಡುವೆ ಕಾಳಜಿ ಕೇಂದ್ರಗಳ ನಿರ್ವಹಣೆ ದೊಡ್ಡ ಸವಾಲಾಗಿದೆ. ಪರಿಸ್ಥಿತಿ ಅರಿತ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ದಿಢೀರ್ ಕೊಡಗಿಗೆ ಆಗಮಿಸಿ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದಾರೆ.
ಇನ್ನು ಮೂರು ದಿನಗಳ ಕಾಲ ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಹಾಗು ಸ್ಥಳೀಯ ಶಾಸಕರ ಜೊತೆ ಪರಿಹಾರ ಕಾರ್ಯದಲ್ಲಿ ತೊಡಗಲಿದ್ದು, ಇಂದು ದುರಂತದ ಸ್ಥಳದ ಬ್ರಹ್ಮಗಿರಿ ಬೆಟ್ಟಕ್ಕೆ ಭೇಟಿ ನೀಡಿ ಕಾರ್ಯಚರಣೆ ಹಾಗೂ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಕೊಡಗಿಗೆ ಈ ವರ್ಷವು ಮಹಾಮಳೆಯ ಆತಂಕ ಎದುರಾಗಿದೆ.