ಗದಗ: ಹಳ್ಳಿಗಾಡಿನ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ವಂಚಿಸುತ್ತಿದ್ದ ವ್ಯಕ್ತಿಗೆ ಗದಗದ ಮಸಾರಿ ಪ್ರದೇಶದಲ್ಲಿ ಜನ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಕಾರ್ಮಿಕ ಕಾರ್ಡ್ ಮಾಡಿಸಿದ್ರೆ ವಿಶ್ವ ಸಂಸ್ಥೆಯಿಂದ ಹಣ ಬರುತ್ತೆ. ಅಂತಹ ಕಾರ್ಮಿಕ ಕಾರ್ಡ್ ತಾನು ನೀಡೋದಾಗಿ ಮಹಿಳೆಯರಿಗೆ ಆ ವ್ಯಕ್ತಿ ವಂಚಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಗದಗದ ಮಸಾರಿ ಪ್ರದೇಶದಲ್ಲಿ ಹಳ್ಳಿಯ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಕುಮಾರ್ ಎಂಬ ವ್ಯಕ್ತಿಗೆ ಸ್ಥಳೀಯರು ಸೇರಿಕೊಂಡು ಬಾರಿಸಿದ್ದಾರೆ. ಚಿತ್ರದುರ್ಗ ಮೂಲದ ಡೆವಲೆಪ್ ಲೈವ್ಲಿವುಡ್ ಫರ್ಮ್ ಸಂಸ್ಥೆಯ ಮೂಲಕ ಸ್ವರದ ಎಂಟರ್ಪ್ರೈಸ್ ರಚಿಸಿಕೊಂಡು ಹಳ್ಳಿಯ ಮಹಿಳೆಯರಿಗೆ ಕುಮಾರ್ ವಂಚಿಸುತ್ತಿದ್ದ ಎನ್ನಲಾಗಿದೆ.
ಕುಮಾರ್, ಚಿತ್ರದುರ್ಗದ ಮೂಲದ ಸಂಸ್ಥೆಯ ನಿರ್ದೇಶಕ. ವಿಶ್ವ ಸಂಸ್ಥೆಯ ಕಾರ್ಮಿಕ ಕಾರ್ಡ್ ಮಾಡಿಸಿಕೊಡುವುದಾಗಿ ಪ್ರತಿ ಕಾರ್ಡ್ಗೆ 1,700 ರೂಪಾಯಿ ವಸೂಲಿ ಮಾಡಿ ಕುಮಾರ್ ವಂಚನೆ ಎಸಗಿದ್ದಾನೆ. ಗದಗ ಜಿಲ್ಲೆಯ ಸಾವಿರಾರು ಕಾರ್ಮಿಕರಿಗೆ ಕಾರ್ಡ್ ಮಾಡೋದಾಗಿ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.
ಕಾರ್ಮಿಕ ಕಾರ್ಡ್ ಮಾಡಿಸಿದ್ರೆ ವಿಶ್ವಸಂಸ್ಥೆಯಿಂದ ಹಣ ಬರುತ್ತೆ. ಶಿಕ್ಷಣಕ್ಕೆ, ಮದುವೆಗೆ, ಅನಾರೋಗ್ಯಕ್ಕೀಡಾದರೆ ಕಾರ್ಮಿಕ ಕಾರ್ಡ್ನಿಂದ ಹಣ ಬರುತ್ತದೆ ಎಂದು ಆರೋಪಿ ಕುಮಾರ್ ಮಹಿಳೆಯರಿಗೆ ನಂಬಿಸುತ್ತಿದ್ದ ಎಂದು ತಿಳಿದುಬಂದಿದೆ. ಬಡಾವಣೆ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿ ಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ.