ವಿಜಯಪುರ : ಗುರುವಾರ ಸಂಜೆ ವಿಜಯಪುರ ನಗರದ ಹೊರ ವಲಯದಲ್ಲಿನ ಕಲ್ಲು ಗಣಿಗಾರಿಕೆ ಯಲ್ಲಿ ನಡೆದ ಸ್ಫೋಟದ ದುರಂತದ ಕುರಿತು ತನಿಖೆ ನಡೆಯುತ್ತಿದೆ. ತನಿಖೆಯ ಬಳಿಕ ಸತ್ಯಾಸತ್ಯತೆ ಹೊರ ಬರಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಗಣಿ- ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ಶುಕ್ರವಾರ ದುರಂತ ನಡೆದ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಅಲಿಯಾಬಾದ್, ಐನಾಪುರ ಪರಿಸರದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಅಕ್ರಮ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಅಶೋಕ ಸಾವಳಗಿ ಎಂಬ ವ್ಯಕ್ತಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸಿದ್ದಾಗಿ ಕಂಡು ಬಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಖಚಿತ ಎಂದರು.
ಗಣಿಯಲ್ಲಿ ದುರಂತ ನಡೆಯಲು ಕಾರ್ಮಿಕರಲ್ಲಿನ ಕೌಶಲ್ಯ ರಹಿತ ವ್ಯವಸ್ಥೆ ಕಾರಣ. ಶಿವಮೊಗ್ಗ, ಚಿಕ್ಕಬಳ್ಳಾಪುರ ಗಣಿ ದುರಂತಗಳಿಗೆ ಕೌಶಲ್ಯ ಇಲ್ಲದಿರುವುದೇ ಕಾರಣ ಎಂಬುದು ಮನವರಿಕೆ ಆಗಿದೆ ಎಂದರು.
ಇಂಥ ದುರಂತಗಳನ್ನು ತಡೆಯುವ ಉದ್ದೇಶದಿಂದಲೇ ರಾಜ್ಯದಲ್ಲಿ ಗಣಿ ಮೈನಿಂಗ್ ಕೌಶಲ್ಯ ಶಿಕ್ಷಣ-ತರಬೇತಿ ಕೇಂದ್ರಗಳನ್ನು ತೆರೆಯುವ ಯೋಜನೆ ರೂಪಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕೃಷ್ಣರಾಜ ಸಾಗರ ಜಲಾಶಯದಲ್ಲಿ ಬಿರುಕು ಇಲ್ಲ ಎಂದು ಜಲಾಶಯದ ಮುಖ್ಯ ಅಭಿಯಂತರರು ಸ್ಪಷ್ಟಪಡಿಸಿದ್ದಾರೆ. ಈ ಪರಿಸರದಲ್ಲಿ ಗಣಿಗಾರಿಕೆ ನಡೆಸುವುದುರಿಂದ ಉಂಟಾಗುವ ಭೂಮಿಯ ಒತ್ತಡದ ಸ್ಥಿತಿಗತಿ ಕುರಿತು ತಜ್ಞರಿಂದ ವರದಿ ಪಡೆಯಲಾಗುತ್ತಿದೆ. ತಜ್ಞರ ಶಿಫಾರಸಿನಂತೆ ಕೃಷ್ಣರಾಜ ಸಾಗರ ಪರಿಸರದಲ್ಲಿ ಗಣಿಗಾರಿಕೆಗೆ ಅನುಮತಿಸುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಅನುಭವ ಇರುವ ಮಂಡ್ಯ ರಾಜಕೀಯ ನಾಯಕರ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ. ಕೃಷ್ಣರಾಜ ಜಲಾಶಯದ ತಪಾಸಣೆ ನಡೆಸುವ ಹೊಣೆಯನ್ನು ಪ್ರತ್ಯೇಕವಾಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ. ಈ ತಜ್ಞರು ನೀಡುವ ವರದಿ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
Laxmi News 24×7