ಕಲಬುರ್ಗಿ: ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಬುಧವಾರ ತಡರಾತ್ರಿ ಉತ್ತಮ ಮಳೆಯಾಗಿದ್ದು, ಮಳೆಯ ರಭಸಕ್ಕೆ ಹಲವು ಕಡೆ ಕಬ್ಬಿನ ಬೆಳೆಗೆ ಹಾನಿಯಾಗಿದೆ.
ಬೀದರ್ ತಾಲ್ಲೂಕಿನ ಶ್ರೀಕಟನಳ್ಳಿ ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಹೊಲದಲ್ಲಿನ ಕಬ್ಬು ನೆಲಕ್ಕೆ ಉರುಳಿದೆ. ಭಾಲ್ಕಿ ಹಾಗೂ ಔರಾದ್ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮಳೆಯಾಯಿತು.
ಕಲಬುರ್ಗಿ ನಗರ ಸೇರಿದಂತೆ ಜಿಲ್ಲೆಯ ಚಿಂಚೋಳಿ, ಆಳಂದ, ಕಮಲಾಪುರ ಹಾಗೂ ಕಾಳಗಿ ತಾಲ್ಲೂಕುಗಳಲ್ಲಿ ಮಳೆಯಾಗಿದೆ. ಭಾರಿ ಗಾಳಿ, ಮಳೆಗೆ ಚಿಂಚೋಳಿ ತಾಲ್ಲೂಕಿನ ಗಡಿಲಿಂಗದಳ್ಳಿಯಿಂದ ಶಿವರಾಮನಾಯಕ ತಾಂಡಾಕ್ಕೆ ಹೋಗುವ ರಸ್ತೆಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿತ್ತು.
ಆಳಂದ ಪಟ್ಟಣ ಹಾಗೂ ಖಜೂರಿ ಗ್ರಾಮದಲ್ಲಿ 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.
ಕರಾವಳಿಯಲ್ಲಿ ಉತ್ತಮ ಮಳೆ (ಮಂಗಳೂರು ವರದಿ): ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿದಿದೆ.
ಮಂಗಳೂರು ಹೊರವಲಯದ ಚೇಳ್ಯಾರಿನಲ್ಲಿ ಮಳೆಗೆ ವಿದ್ಯುತ್ ಪರಿವರ್ತಕ, 5 ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಪಂಚಾಯಿತಿಗೆ ಹೋಗುವ ಮುಖ್ಯ ರಸ್ತೆ ಬಳಿ ಮಣ್ಣು ಕುಸಿದಿದ್ದರಿಂದ ಈ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯಾದ್ಯಂತ ಬೆಳಿಗ್ಗೆ
ಯಿಂದ ಗುಡುಗು ಸಹಿತ ಮಳೆಯಾಗಿದ್ದು, ನಗರದ ಕೆಲವು ರಸ್ತೆಗಳಲ್ಲಿ ನೀರು ಹರಿದು ಪಾದಚಾರಿಗಳು ಪರದಾಡುವಂತಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಕೆಲವು ಕಡೆ ನೀರು ಹರಿದು ಹೋಗದೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಕೆರ್ಮಾಲ್‌ನಲ್ಲಿ 12.8, ಸುರತ್ಕಲ್‌ನಲ್ಲಿ 11.2 ಸೆಂ.ಮೀ. ಮಳೆಯಾಗಿದೆ.
Laxmi News 24×7