ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಕರಾವಳಿ ತಾಲೂಕುಗಳ ಅನೇಕ ಹಳ್ಳಿಗಳು ಜಲಾವೃತವಾಗಿವೆ.ಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ ಯಲ್ಲಾಪುರ ತಾಲೂಕಿನ ತಗ್ಗು ಪ್ರದೇಶಗಳಿಗೆ ಗಂಗಾವಳಿ, ಅಘನಾಶಿನಿ, ಬೇಡ್ತಿ ನದಿ ನೀರು ನುಗ್ಗಿದೆ. ಗಂಗಾವಳಿ ನದಿ ಪ್ರವಾಹದಿಂದ ಅಂಕೋಲಾ ತಾಲೂಕಿನ ವಾಸರಕುದ್ರಗಿ ಹಳ್ಳಿ ಸಂಪೂರ್ಣ ಜಲಾವೃತವಾಗಿದ್ದು, 150 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮದ ಜನರನ್ನು ದೋಣಿ ಮೂಲಕ ರಕ್ಷಣೆ ಮಾಡಲಾಗುತ್ತಿದೆ.
ಹಲವು ಮನೆಗಳಲ್ಲಿ ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು, ದಾಖಲೆಗಳು ನೀರುಪಾಲಾಗಿದ್ದು ಗ್ರಾಮದಲ್ಲಿ ಐದು ಪರಿಹಾರ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಸ್ಥಳಕ್ಕೆ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಅಂಕೋಲ-ಯಲ್ಲಾಪುರ ರಸ್ತೆ ಬಂದ್: ಗಂಗಾವಳಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಜಿಲ್ಲೆಯ ಹುಬ್ಬಳ್ಳಿ ರಸ್ತೆ ರಾಷ್ಟ್ರೀಯ ಹೆದ್ದಾರಿ 63ರ ಸುಂಕಸಾಳ ಬಳಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕಾಗಿದೆ. ಇಲ್ಲಿನ ಹೆಗ್ಗಾರ್, ಡೋಂಗ್ರಿ, ರಾಮನಗುಳಿ, ಸುಂಕಸಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನದಿನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಇದಲ್ಲದೇ ಮಳೆ ಅಬ್ಬರ ಹೆಚ್ಚಾದ್ದರಿಂದ ಅಂಕೋಲ-ಯಲ್ಲಾಪುರ ರಸ್ತೆಯನ್ನು ಬಂದ್ ಮಾಡಲಾಗಿದೆ.
ಮೀನುಗಾರಿಕೆ ಸ್ತಬ್ಧ: ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸುರಿಯುತ್ತಿರುವ ಮಳೆಗೆ ಜನ ಕಂಗಾಲಾಗಿದ್ದಾರೆ. ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣ ವಾಗಿದೆ. ತಗ್ಗು ಪ್ರದೇಶಗಳು ಜಲಾವೃತ್ತವಾಗಿ ಅಪಾಯ ತಂದಿರಿಸಿದೆ. ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು ಜನರನ್ನು ಆತಂಕಕ್ಕೆ ದೂಡಿದೆ. ಜಿಲ್ಲೆಯ ಕರಾವಳಿಯಲ್ಲಿ ಸಮುದ್ರದ ಅಲೆಗಳ ರೌದ್ರ ನರ್ತನಕ್ಕೆ ಮೀನುಗಾರರ ಸ್ಥಿತಿ ಅಯೋಮಯವಾಗಿದೆ. ಸಮುದ್ರ ಆಳೆತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದೆ. ಬಹುತೇಕ ಕಡೆ ಕಡಲ ಕೊರೆತ ಉಂಟಾಗಿ ಸಮುದ್ರದ ನೀರು ಮನೆಗಳಿಗೆ ನುಗ್ಗಿ ಅಪಾರ ಹಾನಿ ಆಗಿದೆ.