ಬೆಂಗಳೂರು: ರಾಜ್ಯಕ್ಕೆ ನೆರೆ ರಾಜ್ಯದಿಂದ ಗಾಂಜಾ ಘಾಟು ಎಗ್ಗಿಲ್ಲದೇ ಕಾಲಿಡುತ್ತಿದೆ. ಕಳೆದ ಮೂರು ವಾರದಿಂದ ಕಣ್ಣಿಟ್ಟಿದ್ದ ಖಾಕಿ ಪಡೆಯಿಂದ ಇಂದು ಭರ್ಜರಿ ಕಾರ್ಯಾಚರಣೆ ನಡೆಸಲಾಗಿದೆ. ಬೆಂಗಳೂರಿನ ಕೆಂಗೇರಿ ಗೇಟ್ ಎಸಿಪಿ ಸ್ಕ್ವಾಡ್‌ನಿಂದ ಈರ್ವರನ್ನು ಬಂಧಿಸಲಾಗಿದ್ದು, ಅವರಿಂದ 50 ಲಕ್ಷ ರೂ. ಮೌಲ್ಯದ 110 ಕೆಜಿ ಶುದ್ಧ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ ಕಾರು ತಡೆದು ಆರೋಪಿಗಳಾದ ಅಪ್ಪಣ್ಣ, ಸುಬ್ರಮಣಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಶಾಖಪಟ್ಟಣಂನ ಗುಡ್ಡಗಾಡು ಪ್ರದೇಶದಲ್ಲಿ ಬೆಳೆದ ಗಾಂಜಾವನ್ನು ಸ್ಥಳೀಯರಿಂದ ಖರೀದಿಸಿ ತಂದು ರಾಜ್ಯದ ಹಲವು ಜಿಲ್ಲೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.
ಮಡಿವಾಳ ಠಾಣೆಯ ಪೊಲೀಸರು ಮಾದಕ ವಸ್ತು ಮಾರಾಟ ಜಾಲವನ್ನು ಬೇಧಿಸಿ ಭರ್ಜರಿ 1.85ಕೋಟಿ ರೂ. ಮೌಲ್ಯದ ಡ್ರಗ್ಸ್ಅನ್ನು ವಶಪಡಿಸಿಕೊಂಡಿದ್ದಾರೆ. ಹ್ಯಾಶ್ ಆಯಿಲ್, ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಲೋಕೇಶ್, ಮೋಹನ್ ಕುಮಾರ್, ಜಬಿ ಎಂಬುವವರನ್ನು ಬಂಧಿಸಿದ್ದಾರೆ. ಈ ವೇಳೆ ಹ್ಯಾಷ್ ಆಯಿಲ್ ಅಸಲಿಯೊ, ನಕಲಿಯೊ ಎಂದು ಪರೀಕ್ಷಿಸುವ ವೇಳೆ ಮೂವರು ಸಿಬ್ಬಂದಿ ಮೂರ್ಛೆ ಹೋಗಿದ್ದಾರೆ. ವಾಹನ ತಪಾಸಣೆ ವೇಳೆ ಸಿಕ್ಕಿದ್ದ ಕ್ಲ್ಯೂ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು. ‘ವಿಶಾಖಪಟ್ಟಣದಿಂದ ಬಂದಿದ್ದೀವಿ’ ಎಂದಿದ್ದ ಆರೋಪಿಗಳ ಮೂಲಕವೇ ಅವರ ಕಿಂಗ್ಪಿನ್ಗೆ ಕರೆ ಮಾಡಿಸಿ ಡ್ರಗ್ಸ್ ಬೇಕೆಂದು ಹೇಳಿ ಪೊಲೀಸರು ಖೆಡ್ಡಾಗಿ ಬೀಳಿಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಹೆಚ್‌ಬಿಆರ್ ಲೇಔಟ್ ಬಳಿ ಕೊಕೇನ್ ಮಾರುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಇದರಲ್ಲಿ ಓರ್ವ ಮಹಿಳೆಯೂ ಸೇರಿದ್ದಾಳೆ. ಅವರಿಂದ 4.70 ಲಕ್ಷ ರೂ. ಮೌಲ್ಯದ 55 ಗ್ರಾಂ ಕೊಕೇನ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳನ್ನು ಟಾರ್ಗೆಟ್ ಮಾಡಿದ್ದರು. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಂಗೇರಿಗೇಟ್ ಎಸಿಪಿ ವಿಶೇಷ ಅಪರಾಧ ಪತ್ತೆ ದಳವು ಕಾರ್ ನಲ್ಲಿ ನೂರು ಕೆಜಿ ಗಾಂಜಾ ಸಾಗಿಸುತಿದ್ದ ಆರೋಪಿಗಳನ್ನು ಬಂಧಿಸಿದೆ. ಮಹಿಂದ್ರಾ ಜೈಲೊ ಕಾರ್ ನಲ್ಲಿ ಆರೋಪಿಗಳು ಗಾಂಜಾ ಸಾಗಿಸುತಿದ್ದರು. ಖಚಿತ ಮಾಹಿತಿ ಆಧರಿಸಿ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ ಕಾರ್ ತಡೆದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.