ಮಂಗಳೂರು, ಜು.5: ದ.ಕ.ಜಿಲ್ಲೆಯ ಖಾಸಗಿ ಬಸ್ ಮಾಲಕರ ಸಂಘವು ಏರಿಕೆ ಮಾಡಿರುವ ಬಸ್ ಪ್ರಯಾಣ ದರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಸೋಮವಾರ ಬಸ್ ಮಾಲಕರ ಸಂಘದ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಲಾಕ್ ಡೌನ್ ಮುಂಚೆ ಚಾಲ್ತಿಯಲ್ಲಿದ್ದ ಪ್ರಯಾಣ ದರವನ್ನು ತೆಗೆದುಕೊಳ್ಳಬೇಕು ಎಂದು ಮಾಲಕರಿಗೆ ಸೂಚಿಸಲಾಗಿದೆ. ಪ್ರಯಾಣ ದರ ಏರಿಕೆಗೆ ಸಂಬಂಧಿಸಿ ಈ ವಾರದೊಳಗೆ ಆರ್‌ಟಿಎ ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ದರ ಏರಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ತೀರ್ಮಾನಿಸಲಾಗುವುದು. ಆವರೆಗೂ ಹೊಸ ಪ್ರಯಾಣ ದರ ಇಲ್ಲ. ಹಳೆಯ ಪ್ರಯಾಣ ದರದಲ್ಲೇ ಪ್ರಯಾಣಿಕರನ್ನು ಕರೆದೊಯ್ಯಬೇಕು ಎಂದು ತಿಳಿಸಲಾಗಿದೆ. ಅದಕ್ಕೆ ಬಸ್ ಮಾಲಕರು ಕೂಡ ಒಪ್ಪಿಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಸುಮಾರು 65 ದಿನಗಳ ಕಾಲ ಸಂಚಾರ ಸ್ಥಗಿತಗೊಳಿಸಲ್ಪಟ್ಟಿದ್ದ ಬಸ್‌ಗಳು ಜು.1ರಿಂದ ಕಾರ್ಯಾರಂಭ ಮಾಡಿತ್ತು. ಈ ಮಧ್ಯೆ ಬಸ್ ಮಾಲಕರು ಏಕಪಕ್ಷೀಯವಾಗಿ ಪ್ರಯಾಣ ದರವನ್ನು ಏರಿಕೆ ಮಾಡಿದ್ದರು. ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪವೂ ವ್ಯಕ್ತವಾಗಿತ್ತು. ಆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯು ಬಸ್ ಮಾಲಕರ ಸಂಘದ ಮುಖಂಡರ ಜೊತೆ ಸೋಮವಾರ ಮಾತುಕತೆ ನಡೆಸಿ, ಆರ್‌ಟಿಎ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವವರೆಗೆ ಪ್ರಯಾಣ ದರ ಏರಿಸಬಾರದು ಎಂದು ಸೂಚಿಸಿದ್ದಾರೆ.