ರಾಮನಗರ, ಜುಲೈ 04; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ್ದ ಪೈಪ್‌ಲೈನ್‌ನಲ್ಲಿ ಸಿಲುಕಿದ್ದ ರೈತನನ್ನು ಅಗ್ನಿಶಾಮಕದಳದ ಸಿಬ್ಭಂದಿ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಸುಮಾರು ಅರ್ಧಗಂಟೆಗಳ ಕಾಲ ರೈತ ಪೈಪ್‌ನಲ್ಲಿ ಸಿಲುಕಿದ್ದ.
ರಾಮನಗರ ತಾಲ್ಲೂಕಿನ ಸಿಂಗ್ರಿಬೋವಿ ದೊಡ್ಡಿ ಗ್ರಾಮದ ಗೋವಿಂದರಾಜು (ರಾಜಣ್ಣ) ಪೈಪ್‌ಲೈನ್‌ನಲ್ಲಿ ಸಿಲುಕಿದ್ದ. ಕೊಂಕಾಣಿದೊಡ್ಡಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರು ದಶಪಥದ ರಾಷ್ಟ್ರೀಯ ಹೆದ್ದಾರಿಯ ಕೆಳಬಾಗದಲ್ಲಿ ಹಳ್ಳದ ನೀರು ಹರಿಯಲು ಹಾಕಿದ್ದ ಪೈಪ್‌ಲೈನ್‌ನಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ.
ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯ ತನ್ನ ಜಮೀನಿನಿಂದ ಹೆದ್ದಾರಿ ಮತ್ತೊಂದು ಬದಿಯಲ್ಲಿ ಇರುವ ಜಮೀನಿಗೆ ನೀರಿನ ಪೈಪ್ ಅಳವಡಿಸಲು ಹೆದ್ದಾರಿಯಲ್ಲಿ ಹಳ್ಳದ ನೀರು ಹರಿಯಲು ಅಳವಡಿಸಿದ್ದ ಬೃಹತ್ ಪೈಪ್‌ಒಳಗೆ ಹೊದ ರಾಜಣ್ಣ ಒಳಭಾಗದಲ್ಲಿ ಸಿಲುಕಿಕೊಂಡ.
ಪೈಲ್ ಸುಮಾರು 200 ಅಡಿ ಉದ್ದ ಇದ್ದು, ರೈತ ರಾಜಣ್ಣ ಪೈಪ್ ಪ್ರವೇಶ ಮಾಡಿದ ನಂತರ ಮಣ್ಣು ಕುಸಿದು ಸುಮಾರು ಅರ್ಧ ಗಂಟೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ. ಅಂತಿಮವಾಗಿ ಪೋಲಿಸರು ಮತ್ತು ಅಗ್ನಿಶಾಮಕ ತಂಡದವರ ಶ್ರಮದಿಂದ ಸಾವನ್ನು ಗೆದ್ದು ಬಂದಿದ್ದಾರೆ.
ಪೈಪ್‌ನಲ್ಲಿ ಸಿಲುಕಿದ್ದ ರೈತ ರಾಜಣ್ಣನನ್ನು ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ರೈತ ಪೈಪ್‌ನಿಂದ ಹೊರಬಂದ ಬಳಿಕ ಜನರು ಚಪ್ಪಾಳೆ ತಟ್ಟಿ ಸಿಬ್ಬಂದಿಗಳನ್ನು ಅಭಿನಂದಿಸಿದರು. ರಾಜಣ್ಣನ ಕುಟುಂಬದವರ ಹರ್ಷಕ್ಕೆ ಪಾರವಿರಲಿಲ್ಲ.
ಡಿಸಿಎಂ ಅಭಿನಂದನೆ; ಪೈಪ್‌ನಲ್ಲಿ ಸಿಲುಕಿಕೊಂಡಿದ್ದ ರೈತನ್ನು ಅತ್ಯಂತ ಎಚ್ಚರಿಕೆಯಿಂದ ರಕ್ಷಣೆ ಮಾಡಿದ ರಾಮನಗರ ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಅಭಿನಂದಿಸಿದ್ದಾರೆ.