ಬೆಂಗಳೂರು, ಜುಲೈ 01; “ಹಾನಗಲ್ ಉತ್ತರ ಕರ್ನಾಟಕದ ಹೆಬ್ಬಾಗಿಲು. ಉತ್ತರ ಕರ್ನಾಟಕದ ಹೆಬ್ಬಾಗಿಲಿನಲ್ಲಿ ಬಾಗಿಲು ತೆರೆಯುವ ಕೆಲಸವನ್ನು ಜೆಡಿಎಸ್ ಮಾಡುತ್ತಿದೆ” ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಗುರುವಾರ ಬೆಂಗಳೂರಿನ ಜೆಪಿ ಭವನದಲ್ಲಿ ಹಾನಗಲ್ ಕ್ಷೇತ್ರದ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಕ್ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಎಚ್. ಡಿ. ಕುಮಾರಸ್ವಾಮಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಮಾತನಾಡಿದ ಕುಮಾರಸ್ವಾಮಿ, “ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣ. ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಜೆಡಿಎಸ್‌ನಿಂದ ಅಲ್ಲ” ಎಂದರು.
ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿ. ಎಂ. ಉದಾಸಿ ಅನಾರೋಗ್ಯದ ಕಾರಣ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದಾರೆ. ಇದರಿಂದಾಗಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. ಜೆಡಿಎಸ್ ಪಕ್ಷ ಈಗಾಗಲೇ ಉಪ ಚುನಾವಣೆಗೆ ಅಭ್ಯರ್ಥಿ ಘೋಷಣೆ ಮಾಡಿದೆ.ಬಿಜೆಪಿ ಲೂಟಿ ಮಾಡುತ್ತಿದೆ
“ಜೆಡಿಎಸ್‌ನಿಂದ ಅಲ್ಲ ಕಾಂಗ್ರೆಸ್‌ನಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ರಾಜ್ಯವನ್ನು ಬಿಜೆಪಿ ಲೂಟಿ ಮಾಡಿದೆ. ಇಂದು ಅಧಿಕಾರದಲ್ಲಿರುವ ಬಿಜೆಪಿ ಅಂದು ರೈತರ ಮೇಲೆ ಗೋಲಿಬಾರ್ ನಡೆಸಿತ್ತು” ಎಂದು ಕುಮಾರಸ್ವಾಮಿ ಆರೋಪಿಸಿದರು.
ಸಿಎಂ ಆಗಲು ಎಲ್ಲರೂ ಸಿದ್ಧರಾಗಿದ್ದಾರೆ
“ಸಿಎಂ ಆಗಲು ಕಾಂಗ್ರೆಸ್‌ನಲ್ಲಿ ಎಲ್ಲರೂ ಸಿದ್ಧರಾಗಿ ಕೂತಿದ್ದಾರೆ. ಗರಿ ಗರಿ ಬಟ್ಟೆ ಹೊಲಿಸಿಕೊಂಡು 8 ಜನ ತಯಾರಿ ಮಾಡಿಕೊಂಡಿದ್ದಾರೆ. ಚುನಾವಣೆ ನಡೆಯುವುದಕ್ಕೂ ಮೊದಲು ಸಿಎಂ ತಯಾರಿ ನಡೆದಿದೆ” ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಅಧಿಕಾರದಿಂದ ಕೆಳಗಿಳಿಸಿದ್ದು ದೇವರು
“15 ಜನರ ಮೇಲೆ ನನಗೆ ಯಾವುದೇ ಬೇಸರವಿಲ್ಲ. ನನ್ನನ್ನು ಅಧಿಕಾರದಿಂದ ಕೆಳಗಿ ಇಳಿಸಿದ್ದು ದೇವರು, 15 ಜನರಲ್ಲ. ನನ್ನ ಜೀವವನ್ನು ಉಳಿಸಿದ್ದು ಕೂಡಾ ದೇವರೇ” ಎಂದು ಕುಮಾರಸ್ವಾಮಿ ಹೇಳಿದರು.
ಯಾರೇ ಬಂದರೂ ಸ್ವಾಗತ
“ಪ್ರಾದೇಶಿಕ ಪಕ್ಷಕ್ಕೆ ಬಲ ತುಂಬಲು ಯಾರೇ ಬಂದರೂ ಜೆಡಿಎಸ್ ಪಕ್ಷ ಸ್ವಾಗತ ಮಾಡುತ್ತದೆ” ಎಂದು ಕುಮಾರಸ್ವಾಮಿ ಹೇಳಿದರು. 2023ರ ಚುನಾವಣೆ ತಯಾರಿ ಆರಂಭಿಸಿರುವ ಜೆಡಿಎಸ್ ಉತ್ತರ ಕರ್ನಾಟಕದಿಂದ ಪಕ್ಷ ಸಂಘಟನೆ ಮಾಡುವ ಚಿಂತನೆಯಲ್ಲಿದೆ.