ಮೈಸೂರು,ಜು.1: ಲಸಿಕೆ ಪಡೆದವರಿಗೆ ಪ್ರಧಾನಮಂತ್ರಿ ಭಾವಚಿತ್ರವಿರುವ ಸರ್ಟಿಫಿಕೇಟ್ ನೀಡಲಾಗುತ್ತಿದೆ. ಹಾಗಿದ್ದರೆ ಕೊರೋನದಿಂದ ಸಾವನ್ನಪ್ಪಿದವರ ಕುಟುಂಬಕ್ಕೂ ಇದೇ ರೀತಿ ಪ್ರಧಾನಮಂತ್ರಿ ಫೋಟೊ ಹಾಕಿ ಮರಣಪತ್ರ ನೀಡಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರ ನಾಥ್ ವಾಗ್ದಾಳಿ ನಡೆಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಲಸಿಕೆ ನೀಡುತ್ತಿರುವುದು ನಮ್ಮ ತೆರಿಗೆ ಹಣದಲ್ಲಿ ಹೀಗಿರುವಾಗ ನಿಮ್ಮ ಫೋಟೊ ಏಕೆ?. ಹಾಗಿದ್ದರೆ ಕೊರೋನದಿಂದ ಸಾವನ್ನಪ್ಪಿದವರ ಕುಟುಂಬಕ್ಕೂ ಇದೇ ರೀತಿ ಪ್ರಧಾನಮಂತ್ರಿ ಫೋಟೊ ಹಾಕಿ ಮರಣಪತ್ರ ನೀಡಿ. ಸ್ವಾತಂತ್ರ್ಯ ಬಂದ ನಂತರ ಹುಟ್ಟಿದ ನಮಗೆಲ್ಲಾ ಚಿಕ್ಕ ವಯಸ್ಸಿನಲ್ಲಿ ಕೆಲವು ಲಸಿಕೆ ನೀಡಿದ್ದಾರೆ. ಆಗ ಯಾವ ಪ್ರಧಾನಿಯೂ ತಮ್ಮ ಫೋಟೊ ಹಾಕಿಸಿಕೊಂಡು ಸರ್ಟಿಫಿಕೇಟ್ ನೀಡಿಲ್ಲ. ಇದೀಗ ಬಿಜೆಪಿ ಸರ್ಕಾರ ಲಸಿಕೆ ಪಡೆದ ಪ್ರತಿಯೊಬ್ಬರಿಗೂ ಸರ್ಟಿಫಿಕೇಟ್ ನೀಡುತ್ತಿದೆ. ಕೊರೋನದಿಂದ ಸಾವನ್ನಪ್ಪಿದವರಿಗೂ ಇದೇ ರೀತಿ ಸರ್ಟಿಫಿಕೇಟ್ ನೀಡಿ. ಇದು ಬಿಜೆಪಿ ಸರ್ಕಾರದ ಸಾಧನೆ ಎಂದು ಜನರಿಗೆ ಗೊತ್ತಾಗಲಿ” ಎಂದು ಲೇವಡಿ ಮಾಡಿದರು.
ಮೂರನೇ ಅಲೆ ಮಕ್ಕಳಿಗೆ ಹರಡಲಿದೆ ಎಂದು ತಜ್ಞರು ಹೇಳಿದ್ದಾರೆ. ಎರಡನೇ ಅಲೆಯಲ್ಲಿ ನನ್ನ ಇಡೀ ಕುಟುಂಬ ಕೋವಿಡ್ ಗೆ ತುತ್ತಾಗಿ ನೊಂದಿದ್ದೇವೆ. ಕೊರೋನವನ್ನು ತಡೆಯುವಲ್ಲಿ ಮತ್ತು ನಿರ್ವಹಣೆ ಮಾಡುವಲ್ಲಿ ಈ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ವೈದ್ಯರು ಮತ್ತು ಪತ್ರಕರ್ತರಿಗೆ ಈ ಸರ್ಕಾರ ವಿಶೇಷ ಪ್ಯಾಕೇಜ್ ನೀಡಲಿಲ್ಲ. ವೈದ್ಯರು ಮತ್ತು ಪತ್ರಕರ್ತರ ದಿನಾಚರಣೆ ಅಂಗವಾಗಿ ಈಗಲಾದರೂ ಇವರಿಗೆ ವಿಶೇಷ ಪ್ಯಾಕೇಜ್ ನೀಡಿ ಎಂದು ಡಾ.ಪುಷ್ಪಾ ಅಮರ ನಾಥ್ ಒತ್ತಾಯಿಸಿದರು.
ರಾಜ್ಯದಲ್ಲಿ ಇದೀಗ ಲಸಿಕೆ ಕೊರತೆ ಎದುರಾಗಿದೆ. ಎಲ್ಲರಿಗೂ ಲಸಿಕೆ ಸಿಗುವಂತಾಗಬೇಕು. ಅದರಲ್ಲೂ ಗರ್ಭಿಣಿಯರಿಗೂ ಲಸಿಕೆ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ. ಹಾಗಾಗಿ ಕೂಡಲೆ ಗರ್ಭಿಣಿಯರಿಗೂ ಲಸಿಕೆ ನೀಡಬೇಕು. ಜೊತೆಗೆ ಮಕ್ಕಳಿಗೂ ಲಸಿಕೆ ನೀಡಬೇಕು. ವಿದೇಶಗಳಲ್ಲಿ ಜನರಿಗೆ ಲಸಿಕೆ ನೀಡಿ ಪ್ರಾಣಿಗಳಿಗೂ ಲಸಿಕೆ ನೀಡುತ್ತಿದ್ದಾರೆ. ಆದರೆ ಭಾರತದಲ್ಲಿ ಪ್ರಾಣಿಗಳಿಗಿರಲಿ ಮನುಷ್ಯರಿಗೆ ಲಸಿಕೆ ಇಲ್ಲ. ಹೇಳಿಕೊಳ್ಳೋಕೆ ಭಾರತೀಯ ಜನತಾ ಪಕ್ಷ ಆದರೆ ಇದು ಭಾರತೀಯ ಜನರ ವಿರೋಧ ಪಕ್ಷ. ಪೊಲೀಯೋ ಲಸಿಕೆ ಮಾದರಿಯಲ್ಲಿ ಎಲ್ಲಾ ಮಕ್ಕಳಿಗೂ ಲಸಿಕೆ ನೀಡಬೇಕು. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲಸಿಕೆ ಅಭಿಯಾನ ಮಾಡಬೇಕು. ಲಸಿಕೆಗಾಗಿಯೇ ವಿಶೇಷ ಅಧಿವೇಶನ ಮಾಡಬೇಕು ಎಂದು ಡಾ.ಪುಷ್ಪಾ ಅಮರ ನಾಥ್ ಒತ್ತಾಯಿಸಿದರು.