ಬಾಗಲಕೋಟೆ: ಮಾಜಿ ಸಚಿವ ರಮೇಶ ಜಾರಕಿಹೊಳಿ ಬಹಳ ಸರಳ ಮನುಷ್ಯ. ಅವರ ಕ್ಯಾಸೆಟ್ (ಸಿಡಿ) ಕ್ರಿಯೆಟ್ ಮಾಡಿ ಅವರಿಗೆ ದುಃಖ ತಂದಿದ್ದಾರೆ. ಅವರು ಎರಡು ವರ್ಷ ಶಾಸಕರಾಗಿ ಇರುತ್ತಾರೆ. ಪ್ರಸಂಗ ಬಂದರೆ ಶೀಘ್ರವೇ ಸಚಿವರೂ ಆಗುತ್ತಾರೆ ಎಂದು ಆಹಾರ ಖಾತೆ ಸಚಿವ ಉಮೇಶ ಕತ್ತಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರನ್ನು ಮತ್ತೆ ಸಚಿವರನ್ನಾಗಿ ಮಾಡುವ ಪ್ರಯತ್ನ ನಮ್ಮ ಸಚಿವ ಸಂಪುಟದಿಂದ ನಡೆದಿದೆ. ನಾನು, ಜಾರಕಿಹೊಳಿ ಒಂದೇ ಜಿಲ್ಲೆಯವರು. ಉತ್ತಮ ಗೆಳೆಯರು. ಸದ್ಯ 34 ಜನ ಸಚಿವರಿದ್ದೇವೆ. ಇವರನ್ನು ಬಿಟ್ಟು ಮತ್ತೂಬ್ಬರನ್ನು ಸಚಿವರನ್ನಾಗಿ ಮಾಡಲು ಬರುವುದಿಲ್ಲ. 34 ಸಚಿವರನ್ನೇ ಫಿಟ್ (ಗಟ್ಟಿ) ಮಾಡುವ ಪ್ರಯತ್ನ ಮಾಡುತ್ತೇವೆ. ಅವರು ನನ್ನಷ್ಟೇ ವಯಸ್ಸಿವರು. ನಾನು ಅವರೊಂದಿಗೆ ಮಾತನಾಡುತ್ತಿರುತ್ತೇನೆ. ಅವರು ರಾಜೀನಾಮೆ ಕೊಡುವ ಪ್ರಸಂಗ ಬಂದಿಲ್ಲ. ಅವರನ್ನು ಮತ್ತೆ ಸಚಿವರನ್ನಾಗಿ ಮಾಡುವುದು ಸಿಎಂಗೆ ಬಿಟ್ಟ ವಿಚಾರ.
ಬಿಜೆಪಿಯಲ್ಲಿ ಸಿಎಂ ಬದಲಾವಣೆ ವಿಷಯಕ್ಕೆ ಕಚ್ಚಾಟ ನಡೆದಿದೆ ಎನ್ನುವ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ, ಮೊದಲು ತಮ್ಮ ಕಾಂಗ್ರೆಸ್ ಪಕ್ಷ ಸರಿ ಮಾಡಿಕೊಳ್ಳಲಿ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಅಥವಾ ದಲಿತ ಮುಖ್ಯಮಂತ್ರಿಯೋ ಎಂಬುದನ್ನು ತೀರ್ಮಾನ ಮಾಡಲಿ ಎಂದರು.