Breaking News

ಜುಲೈನಲ್ಲಿ ದೊಡ್ಡ ಮಟ್ಟದ ಲಸಿಕೆ ಅಭಿಯಾನ: ಸಚಿವ ಪ್ರಹ್ಲಾದ ಜೋಶಿ

Spread the love

ಹುಬ್ಬಳ್ಳಿ: ‘ಜುಲೈ ತಿಂಗಳಿನಲ್ಲಿ ದೊಡ್ಡ ಮಟ್ಟದಲ್ಲಿ ಕೋವಿಡ್ ಲಸಿಕೆ ಅಭಿಯಾನ ನಡೆಯಲಿದೆ. ವಿಶ್ವದಲ್ಲೇ ಅತ್ಯಂತ ವೇಗವಾಗಿ ಲಸಿಕೆ ಅಭಿಯಾನ ನಡೆಯುತ್ತಿರುವ ದೇಶ ಭಾರತವಾಗಿದ್ದು, ಇದುವರೆಗೆ 32 ಕೋಟಿ ಲಸಿಕೆ ನೀಡಲಾಗಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನೈಸರ್ಗಿಕ ವಿಕೋಪದಿಂದ ಮೃತಪಟ್ಟ ಎಂಟು ಜನರ ಕುಟುಂಬದವರಿಗೆ ಸೋಮವಾರ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಅವರು, ‘ತಯಾರಕರು ಉತ್ಪಾದನೆಗೆ ಅನುಗುಣವಾಗಿ ಲಸಿಕೆ ಪೂರೈಕೆ ಮಾಡುತ್ತಿದ್ದಾರೆ. ಹಾಗಾಗಿ, ಆದ್ಯತಾ ವಲಯಗಳನ್ನು ಗುರುತಿಸಿ ಲಸಿಕೆ ನೀಡಲಾಗುತ್ತಿದೆ. ದೇಶದ ಜನಸಂಖ್ಯೆ ಅನುಸಾರ 270 ಕೋಟಿ ಲಸಿಕೆ ಬೇಕಾಗಿದೆ. ಚೀನಾ ಹೊರತುಪಡಿಸಿದರೆ ಜಗತ್ತಿನ ಎಲ್ಲಾ ರಾಷ್ಟ್ರಗಳ ಒಟ್ಟು ಲಸಿಕೆ ಪ್ರಮಾಣ ಭಾರತಕ್ಕೆ ಸಮವಾಗುತ್ತದೆ’ ಎಂದರು.

‘ಅಪಪ್ರಚಾರದಿಂದಾಗಿ ಲಸಿಕೆ ಬಗ್ಗೆ ಜನರಿಗೆ ಇದ್ದ ನಿರ್ಲಕ್ಷ್ಯ ಮನೋಭಾವ, ಇದೀಗ ಕಡಿಮೆಯಾಗಿದೆ. ಧಾರವಾಡ ಜಿಲ್ಲೆಯ ಕೆಲವು ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಜನದಟ್ಟಣೆ ಉಂಟಾಗಿದೆ. ಕಡಿಮೆ ದಟ್ಟಣೆ ಇರುವ ಕೇಂದ್ರಗಳಲ್ಲಿ ಉಳಿದ ಲಸಿಕೆಗಳನ್ನು ಹೆಚ್ಚಿನ ದಟ್ಟಣೆ ಇರುವಲ್ಲಿಗೆ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ, ಬೆಳಿಗ್ಗೆ 10.30ರ ಬದಲಿಗೆ 8 ಗಂಟೆಗೆಯಿಂದಲೇ ಲಸಿಕೆ ನೀಡುವಂತೆ ಸಲಹೆ ನೀಡಲಾಗುವುದು’ ಎಂದು ತಿಳಿಸಿದರು.

‘ಚನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ಯೋಜನೆಯಲ್ಲಿ ಕೆಲ ತಾಂತ್ರಿಕ ತೊಂದರೆ ಎದುರಾಗಿರುವುದರಿಂದ ಕಾಮಗಾರಿ ಆರಂಭ ವಿಳಂಬವಾಗಿದೆ. ಕೊಪ್ಪಿಕರ ರಸ್ತೆ ಮತ್ತು ನೆಹರೂ ಮೈದಾನ ರಸ್ತೆಗಳನ್ನು ಮೇಲ್ಸೇತುವೆಗೆ ಸಂಪರ್ಕಿಸಲು ಅನುಕೂಲ ಆಗುವ ಹಾಗೆ ಕಾಮಗಾರಿಯನ್ನು ಚಿಟುಗುಪ್ಪಿ ಆಸ್ಪತ್ರೆಯಿಂದ ಕೈಗೊಳ್ಳುವಂತೆ ಸಲಹೆಗಳು ಬಂದಿವೆ. ಈ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಪರಿಶೀಲಿಸಿ ಕಾಮಗಾರಿ ಆರಂಭಿಸಲಾಗುವುದು. ಭೂ ಸ್ವಾಧೀನಕ್ಕೆ ಅಗತ್ಯ ಪರಿಹಾರ ನೀಡಲು ಹಣದ ಕೊರತೆ ಎದುರಾಗಿದ್ದರೆ, ಅಧಿಕಾರಿಗಳು ನನ್ನ ಗಮನಕ್ಕೆ ತರಲಿ. ಅದಕ್ಕೆ ವ್ಯವಸ್ಥೆ ಮಾಡುತ್ತೇನೆ’ ಎಂದು ಹೇಳಿದರು.

‘ಅವಳಿನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಸಹ ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿವೆ. ಕೆಲ ಕಾಮಗಾರಿಗಳಿಗೆ ಆರೇಳು ಸಲ ಟೆಂಡರ್ ಕರೆದರೂ ಯಾರೂ ಬಂದಿಲ್ಲ. ಹಾಗಾಗಿ, ನಿಯಮ ಸಡಿಲಿಸಿ ಟೆಂಡರ್ ನೀಡಿ, ಆದಷ್ಟು ಬೇಗ ಕೆಲಸಗಳನ್ನು ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ಎಂಟು ಮಂದಿಗೆ ₹2 ಲಕ್ಷ ಪರಿಹಾರ ವಿತರಣೆ

ಕಳೆದ ವರ್ಷ ನೈಸರ್ಗಿಕ ವಿಕೋಪದಿಂದಾಗಿ ಜಿಲ್ಲೆಯಲ್ಲಿ ಮೃತಪಟ್ಟಿದ್ದ 8 ಮಂದಿಯ ಕುಟುಂಬದವರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ತಲಾ ₹2 ಲಕ್ಷದ ಚೆಕ್ ಅನ್ನು ಪ್ರಹ್ಲಾದ ಜೋಶಿ ವಿತರಿಸಿದರು.

ಧಾರವಾಡ ತಾಲ್ಲೂಕಿನ ಹಾರೋಬೆಳವಡಿಯ ನಾಗಪ್ಪ ಜಕ್ಕಣ್ಣವರ, ನರೇಂದ್ರದ ನಿಂಗವ್ವ ಪಾಟೀಲ, ಹುಬ್ಬಳ್ಳಿ ತಾಲ್ಲೂಕಿನ ಅಮರಗೋಳದ ಆಶ್ರಯ ಕಾಲೊನಿಯ ಸಹದೇವಪ್ಪ ಸಯಣ್ಣವರ, ಕಲಘಟಗಿ ತಾಲ್ಲೂಕಿನ ಕಲಘಟಗಿಯ ಸಾವಿತ್ರಿ ರೇವಣಕರ, ಗಂಜಿಗಟ್ಟಿಯ ಹನುಮಂತಪ್ಪ ಗಾಣಿಗೇರ, ಕುಂದಗೋಳ ತಾಲ್ಲೂಕಿನ ನೆಲಗುಡ್ಡದ ಮಂಜುನಾಥ ಗಿಡ್ಡಬಸಪ್ಪನವರ, ಅಣ್ಣಿಗೇರಿ ತಾಲ್ಲೂಕಿನ ಬಲ್ಲರವಾಡದ ಸಾವಕ್ಕ ಮಾದರ ಹಾಗೂ ನವಲಗುಂದ ತಾಲ್ಲೂಕಿನ ಬಲ್ಲರವಾಡದ ಅನಸೂಯ ಶ್ರೀಕಾಂತರಡ್ಡಿ ಅವರಿಗೆ ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು.

ಮೃತರ ಕುಟುಂಬಗಳಿಗೆ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ, ರಾಜ್ಯ ಸರ್ಕಾರದಿಂದ ಈಗಾಗಲೇ ಪರಿಹಾರ ವಿತರಿಸಲಾಗಿದೆ. ಇದೀಗ ಹೆಚ್ಚುವರಿಯಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ತಲಾ ₹2 ಲಕ್ಷ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.


Spread the love

About Laxminews 24x7

Check Also

ಶ್ರೀರಾಮುಲುಗೂ ವಿಜಯೇಂದ್ರ ಮುಂದುವರಿಯುವುದು ಬೇಕಿಲ್ಲ, ಅದನ್ನು ಚಾಣಾಕ್ಷತೆಯಿಂದ ಹೇಳುತ್ತಾರೆ!

Spread the loveಕೋಲಾರ: ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರಿಗೂ ಬಿವೈ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷನಾಗಿ ಮುಂದುವರಿಯುವುದು ಬೇಕಿಲ್ಲ, ಅದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ