ಚಿಕ್ಕೋಡಿ: ಪರಿಸರದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಬೆಲೆ ಏನೇಂಬುದು ನಮಗೆ ಗೊತ್ತಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಸಸಿ ನೆಡುವ ಕಾರ್ಯಕ್ರಮಕ್ಕೆ ಉಮೇಶ್ ಕತ್ತಿ ಅವರು ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸಸಿ ನೆಟ್ಟು ಹೆಚ್ಚಿನ ಪ್ರಮಾಣದಲ್ಲಿ ಕಾಡನ್ನು ಬೆಳೆಸಿದರೆ ವಾಯುಮಾಲಿನ್ಯ ನಿರ್ಮೂಲನೆ ಆಗುವುದರ ಜೊತೆಗೆ ಆಕ್ಸಿಜನ್ ಉತ್ಪಾದನೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಬೆಲೆ ಏನೇಂಬುದು ನಮಗೆ ಗೊತ್ತಾಗಿದೆ. ಜೀವ ವಾಯು ಆಕ್ಸಿಜನ್ ಪ್ರಮಾಣ ಹೆಚ್ಚಿಸಲು ಕಾಡನ್ನ ಉಳಿಸಿ ಬೆಳೆಸಬೇಕಾಗುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ಪ್ರತಿಯೊಬ್ಬರು ಮರಗಳನ್ನ ನೆಟ್ಟು ಪರಿಸರವನ್ನ ರಕ್ಷಿಸಬೇಕು. ಪರಿಸರ ನಾಶದಿಂದ ಭೂಮಿ ವಿನಾಶದತ್ತ ತೆರಳುತ್ತಿದೆ. ಹೀಗಾಗಿ ಮರಗಳನ್ನ ಉಳಿಸಿ ಬೆಳೆಸುವ ಕಾರ್ಯ ನಮ್ಮದಾಗಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಹುಕ್ಕೇರಿ ತಹಶೀಲ್ದಾರ ಡಿ.ಎಂ.ಹೂಗಾರ, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ, ಪಿ ಎಸ್ ಐ ಸಿದ್ದರಾಮಪ್ಪ ಉನ್ನದ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.