ಬೆಂಗಳೂರು – ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸಲಾಗುವುದು. ವಾರದೊಳಗೆ ಈ ಪ್ರಕ್ರಿಯೆ ಮುಗಿಸಲು ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಕಾಂಗ್ರೆಸ್ ಪ್ರಮುಖರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಕಡೆ 3 ವರ್ಷ ಪೂರ್ಣಗೊಂಡಿದೆ. ಕೆಲವು ಕಡೆ ಬದಲಾವಣೆ ಬೇಡಿಕೆ ಇದೆ. ಕೆಲವರು ಸ್ವಯಂ ಪ್ರೇರಿತರಾಗಿ ಸ್ಥಾನ ಬಿಟ್ಟುಕೊಡಲು ಮುಂದಾಗಿದ್ದಾರೆ. ಅಂತಹ ಕಡೆಗಳಲ್ಲಿ ಜಿಲ್ಲಾವಾರು ಸಭೆ ನಡೆಸಿ ಅಧ್ಯಕ್ಷರನ್ನು ಬದಲಾಯಿಸಲಾಗುವುದು ಎಂದು ತಿಳಿಸಿದರು.
ಕೆಲವು ಕಡೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ, ಇತರ ಪದಾಧಿಕಾರಿಗಳ ಬದಲಾವಣೆ ಕೂಡ ಆಗಲಿದೆ. ಕೆಲವು ಶಾಸಕರಿಂದಲೂ ಈ ಬಗ್ಗೆ ಬೇಡಿಕೆ ಬಂದಿದೆ. ಎಲ್ಲರೂ ಕುಳಿತು ಮಾತನಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ರಮೇಶ ಜಾರಕಿಹೊಳಿ, ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಹೇಳಿರುವುದರ ಕುರಿತು ಪ್ರಶ್ನಿಸಿದಾಗ, ಅವರು ನಮ್ಮ ಪಕ್ಷದಲ್ಲೇ ಇಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯಿಸುವ ಅವಶ್ಯಕತೆಯೇ ಇಲ್ಲ. ಅವರನ್ನು ಕಾಂಗ್ರೆಸ್ ಗೆ ಬರುವಂತೆ ನಾವು ಕರೆದೇ ಇಲ್ಲ, ಬಾ ಎಂದು ಹೇಳುವ ಪ್ರಶ್ನೆಯೂ ಇಲ್ಲ. ಹಾಗಾಗಿ ಅವರ ಹೇಳಿಕೆಗೆ ಮಹತ್ವವಿಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.