ಬೆಂಗಳೂರು: ಆಡುಗೋಡಿ ಸಂಚಾರ ಠಾಣೆ ಬಳಿಯ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಸವಾರರೊಬ್ಬರ ಕತ್ತಿಗೆ ಗಾಳಿಪಟದ ದಾರ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ದಾರವನ್ನು ಬಿಡಿಸಲು ಹೋಗಿ 2 ಬೆರಳನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ.
ವ್ಯಕ್ತಿಯೊಬ್ಬರು ಬುಧವಾರ ಆಡುಗೋಡಿ ಸಮೀಪದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಡೆಗೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದರು. ಆಡುಗೋಡಿ ಸಂಚಾರ ಠಾಣೆ ಮುಂಭಾಗದ ರಸ್ತೆಯಲ್ಲಿ ಏಕಾಏಕಿ ಗಾಳಿಪಟದ ದಾರ ಆ ವ್ಯಕ್ತಿಯ ಕತ್ತಿಗೆ ಸಿಕ್ಕಿಹಾಕಿಕೊಂಡಿತ್ತು. ಪರಿಣಾಮ ಕತ್ತಿನ ಭಾಗಕ್ಕೆ ಗಾಯವಾಗಿ ರಕ್ತಸ್ರಾವ ಉಂಟಾಗಿದೆ. ಇದರಿಂದ ಪಾರಾಗಲು ಯತ್ನಿಸಿದ ವ್ಯಕ್ತಿ ಎಡ ಕೈಯಿಂದ ದಾರವನ್ನು ಎಳೆದಿದ್ದಾರೆ. ಆ ವೇಳೆ ಅವರ ಕೈಗೂ ಗಾಯವಾಗಿದ್ದು, 2 ಬೆರಳು ತುಂಡಾಗುವಂತಾಗಿದೆ. ನಂತರ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ನಡುವೆ ವಿಡಿಯೋ ಮಾಡಿ ನಡೆದ ಸಂಗತಿಯನ್ನು ವಿವರಿಸಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಕೋರಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋದಲ್ಲಿ ಏನಿದೆ ?
ಗಾಳಿಪಟವನ್ನು ದಯವಿಟ್ಟು ಬ್ಯಾನ್ ಮಾಡಿ ಎಂದು ಜನಪ್ರತಿನಿಧಿಗಳಿಗೆ ಈ ಮೂಲಕ ಕೇಳಿಕೊಳ್ಳುತ್ತೇನೆ. ಪಕ್ಷಿಗಳಿಗಾದರೂ, ಮನುಷ್ಯರಿಗಾದರೂ ಇದೇ ಗತಿ ಬರುತ್ತದೆ. ನಾನು ಇಂದು ಉಳಿದಿರುವುದೇ ಹೆಚ್ಚು. ಒಂದು ವೇಳೆ ತುಸು ವೇಗವಾಗಿ ದ್ವಿಚಕ್ರವಾಹನದಲ್ಲಿ ಬಂದು ದಾರಕ್ಕೆ ಸಿಲುಕಿದ್ದರೆ ನನ್ನ ಕತ್ತನ್ನು ಮಾತ್ರ ನೋಡಬೇಕಿತ್ತು. ಅಂತಹ ಪರಿಸ್ಥಿತಿ ಉಂಟಾಗುತ್ತಿತ್ತು. ಚಿಕ್ಕ ಹುಡುಗರು ಇದ್ದಿದ್ದರೆ ಅವರ ಗತಿ ಏನಾಗುತ್ತಿತ್ತು ಎಂಬುದನ್ನು ಊಹಿಸಲು ಕಷ್ಟವಾಗುತ್ತದೆ. ನಾನು ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮವನ್ನು ಪಾಲಿಸಿಕೊಂಡೇ ಹೋಗುತ್ತಿದ್ದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸುವಂತೆ ಗಾಯಗೊಂಡ ವ್ಯಕ್ತಿ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ದುರ್ಘಟನೆ ನಡೆದ ಸ್ಥಳದ ಬಳಿ ಇರುವ ಯಾವುದೋ ಮನೆಯ ಟೆರೇಸ್‌ನಿಂದ ಗಾಳಿಪಟ ಹಾರಿಸುತ್ತಿದ್ದಾಗ ಅದು ಕೆಳಗೆ ಬಿದ್ದು, ಇವರ ಕತ್ತಿಗೆ ಸಿಲುಕಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.