ಬೆಳಗಾವಿ: ‘ಅವ್ರು ಗೆದ್ದು ಬರಬೇಕಲ್ಲ. ಗೆದ್ದರೂ ಒಂದಾಗಬೇಕಲ್ಲ? ಎಲ್ಲರೂ ಕುಸ್ತಿ ಅಖಾಡದಲ್ಲಿದ್ದಾರೆ. ಒಬ್ಬನ ಚಡ್ಡಿ ಇನ್ನೊಬ್ಬನ ಕೈಯಲ್ಲಿದೆ. ಯಾರು ಯಾರನ್ನು ಬೆತ್ತಲೆ ಮಾಡುತ್ತಾರೋ ಗೊತ್ತಿಲ್ಲ. ಕುಸ್ತಿಯನ್ನು ನೋಡೋಣ’.
– ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ‘ಮುಂದಿನ ಮುಖ್ಯಮಂತ್ರಿ’ ಚರ್ಚೆ ಬಗ್ಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವ್ಯಂಗ್ಯವಾಡಿದ್ದು ಹೀಗೆ.
ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ-ಡಾ.ಜಿ. ಪರಮೇಶ್ವರ ಸೇರಿ ಮೂರು ಪ್ರಬಲ ಗುಂಪುಗಳಿವೆ. ಇದರ ನಡುವೆ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ನನಗೂ 91 ವರ್ಷವಾಗಿದ್ದು, ನಾನ್ಯಾಕೆ ಮುಖ್ಯಮಂತ್ರಿ ಆಗಬಾರದು ಎನ್ನುತ್ತಾರೆ. ಹೀಗಾಗಿ ಕಾಂಗ್ರೆಸ್‌ನವರದ್ದು ತಿರುಕನ ಕನಸಷ್ಟೆ. ಅದು ನನಸಾಗುವುದಿಲ್ಲ. ಆ ಪಕ್ಷ ಇನ್ನು ಹೀನಾಯ ಸ್ಥಿತಿಗೆ ಹೋಗಲಿದೆ’ ಎಂದರು.
ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ರಾಜೀನಾಮೆಗೆ ಮುಂದಾಗಿದ್ದಾರೆಯೇ ಎಂಬ ಪ್ರಶ್ನೆಗೆ, ‘ಆ ಬಗ್ಗೆ ನನಗೇನೂ ಗೊತ್ತಿಲ್ಲ. ಹೀಗಾಗಿ, ಏನನ್ನೂ ಹೇಳುವುದಿಲ್ಲ. ಅವರನ್ನು ಸಂಪರ್ಕಿಸಿಯೂ ಇಲ್ಲ’ ಎಂದು ಪ್ರತಿಕ್ರಿಯಿಸಿದರು.
‘ನಮ್ಮಲ್ಲಿ ಯಾವುದೇ ಗಲಾಟೆ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ಮುಂದೆ ಕಾರ್ಯಸೂಚಿಯೇ ಇಲ್ಲ. ಬಿ.ಎಸ್. ಯಡಿಯೂರಪ್ಪ ಅವರನ್ನೇ ಮುಂದುವರಿಸುತ್ತಾರೆ’ ಎಂದರು.
Laxmi News 24×7