ಮಂಗಳೂರು: ಮಾಜಿ ಎಂಎಲ್‍ಸಿ ಐವಾನ್ ಡಿಸೋಜಾಗೆ ಕೊರೊನಾ ಪಾಸಿಟಿವ್ ಆಗಿದ್ರೂ ಅವರ ಜೊತೆ ದಿನವಿಡೀ ಸುತ್ತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಇಂದು ಕೂಡಾ ಜನರ ಮಧ್ಯೆ ಸುತ್ತಾಡುತ್ತಿದ್ದಾರೆ. ಕಾನೂನು, ನಿಯಮಗಳು ಜನಪ್ರತಿನಿಧಿಗಳಿಗೆ ಅನ್ವಯ ಆಗಲ್ವಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಜುಲೈ 31 ರಂದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಾಗ ಸ್ವಾಗತಿಸಲು ಐವಾನ್ ಡಿಸೋಜಾ ಅವರು ಹೋಗಿದ್ದರು. ಯಾವುದೇ ಸಾಮಾಜಿಕ ಅಂತರವಿಲ್ಲದೆ ಜೊತೆಯಲ್ಲಿದ್ದು ಬಳಿಕ ಕಾಂಗ್ರೇಸ್ ಕಚೇರಿಯಲ್ಲಿ ಕಾರ್ಯಕರ್ತರ ಭೇಟಿ ಮಾಡಿದಾಗ ನೂರಾರು ಜನ ಸ್ಥಳದಲ್ಲಿದ್ದರು. ಬಳಿಕ ಸುದ್ದಿಗೋಷ್ಟಿಯನ್ನು ಎಸಿ ರೂಂನಲ್ಲಿ ನಡೆಸಿದ್ದು ಐವಾನ್ ತಮ್ಮ ಮಾಸ್ಕ್ ತೆಗೆದು ಡಿಕೆ ಶಿವಕುಮಾರ್ ಪಕ್ಕದಲ್ಲಿಯೇ ಕುಳಿತಿದ್ದರು.
ಸುದ್ದಿಗೋಷ್ಠಿಯ ಬಳಿಕ ಐವಾನ್ ಡಿಸೋಜಾ ಡಿ.ಕೆ.ಶಿವಕುಮಾರ್ ಅವರನ್ನು ಮುಟ್ಟಿಕೊಂಡೇ ಇದ್ರು. ಅಂದು ಜ್ವರವಿದ್ರೂ ಎಲ್ಲಾ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದ ಐವಾನ್ ಅವರಿಗೆ ಮಾರನೇ ದಿನ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ದೃಢವಾಗಿತ್ತು.ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಎಲ್ಲಾ 40 ಪತ್ರಕರ್ತರಿಗೂ ಆರೋಗ್ಯ ಇಲಾಖೆ ಕಡ್ಡಾಯ ಕ್ವಾರಂಟೈನ್ ಗೆ ಸೂಚಿಸಿದೆ. ಆದರೆ ಐವಾನ್ ಅವರ ಪ್ರಾಥಮಿಕ ಸಂಪರ್ಕ ಹೊಂದಿದ ಡಿಕೆ ಶಿವಕುಮಾರ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಇಂದೂ ಕೂಡಾ ಕಲಬುರಗಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಕಾನೂನು ಬಡ ಜನರಿಗೆ ಮಾತ್ರ ಜನಪ್ರತಿನಿಧಿಗಳಿಗೆ ಇಲ್ವಾ ಅನ್ನೋ ಪ್ರಶ್ನೆ ಮೂಡಿದೆ.