Breaking News

ವೇದಗಂಗಾ ನದಿಯಲ್ಲಿ ಕೊಚ್ಚಿಹೋಗಿ ಮರ ಹತ್ತಿ ಕುಳಿತಿದ್ದ ಯುವಕನನ್ನು ರೋಚಕ ಕಾರ್ಯಾಚರಣೆಯ ಮೂಲಕ ರಕ್ಷಿಸಿದ ಸ್ಥಳೀಯರು

Spread the love

ಬೆಳಗಾವಿ: ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸಿದ್ನಾಳ ಗ್ರಾಮದ ಬಳಿ ವೇದಗಂಗಾ ನದಿ ದಾಟುತ್ತಿದ್ದಾಗ ಕೊಚ್ಚಿಹೋಗಿದ್ದ ಯುವಕನನ್ನು ಸತತ 5 ಗಂಟೆಗಳ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ. ಎನ್​ಡಿಆರ್​ಎಫ್​ ತಂಡ ರಕ್ಷಣಾ ಕಾರ್ಯಾಚರನೆ ನಡೆಸುತ್ತಿದ್ದರೂ ಸ್ಥಳೀಯರೇ ನದಿಯಲ್ಲಿ ಕೊಚ್ಚಿಹೋಗಿದ್ದ ದಿಗ್ವಿಜಯ್ ಕುಲಕರ್ಣಿ ಎಂಬ ಯುವಕನ್ನು ರಕ್ಷಿಸಿದ್ದಾರೆ.

ಸೇತುವೆ ಮೇಲೆ ಹರಿಯುತ್ತಿದ್ದ ವೇದಗಂಗಾ ನದಿ ದಾಟಲು ಯತ್ನಿಸಿದ್ದ ಯುವಕ ದಿಗ್ವಿಜಯ ಕುಲಕರ್ಣಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ. ನದಿಯ ಮಧ್ಯೆ ಸಿಕ್ಕ ಮರ ಹತ್ತಿ ಕುಳಿತು ಸಹಾಯಕ್ಕಾಗಿ ನಿರೀಕ್ಷಿಸುತ್ತಿದ್ದ. ಯುವಕನ ರಕ್ಷಣೆಗೆ ಸತತ ಐದು ಗಂಟೆಗಳಿಂದ ಎನ್​ಡಿಆರ್​ಎಫ್ ಯತ್ನಿಸುತ್ತಿತ್ತು. ಆದರೆ ಸ್ಥಳಿಯರು ಎನ್​ಡಿಆರ್​ಎಫ್ ಪ್ರಯತ್ನದ ನಡುವೆಯೂ ತಾವೇ ರಕ್ಷಣೆಗೆ ಮುಂದಾಗಿದ್ದರು. ಯುವಕನಿಗೆ ಹಗ್ಗ ಕಟ್ಟಿದ ಟ್ಯೂಬ್ ನೀಡಿ ಸ್ಥಳೀಯ ನಾಗರಿಕರು ದಡಕ್ಕೆಳೆದು ತಂದಿದ್ದಾರೆ. ಈ ರೋಚಕ ಕಾರ್ಯಾಚರಣೆ ಸ್ಥಳೀಯರ ಮೊಬೈಲ್​ಗಳಲ್ಲಿ ಸೆರೆಯಾಗಿದೆ.

ಮಲಪ್ರಭಾ ನದಿಯಲ್ಲಿ ಮುಳುಗಿದ್ದ ವ್ಯಕ್ತಿಯ ಮೃತದೇಹ ಪತ್ತೆ
ಮಲಪ್ರಭಾ ನದಿಯಲ್ಲಿ ಕೊಚ್ಚಿಹೋಗಿದ್ದ ಯಕ್ಕುಂಡಿ ಬಳಿ ಹುಸೇನ್ ಸಾಬ್ ಅತ್ತಾರ(52) ಎಂಬುವವರ ಮೃತದೇಹ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಹುಸೇನ್ ಸಾಬ್ ಅತ್ತಾರ ಮಕ್ಕಳ ಜೊತೆ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಆದರೆ ತೆಪ್ಪದಲ್ಲಿ ಸಂಚರಿಸುವಾಗ ತೆಪ್ಪ ಮುಳುಗಿ ಕೊಚ್ಚಿಹೋಗಿದ್ದರು. ಅವರ ಈಜಿ ಇಬ್ಬರು ಮಕ್ಕಳು ಈಜಿ ದಡ ಸೇರಿದ್ದರು.

ಮಳೆಯಿಂದ ಆಗುವ ಅನಾಹುತ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲು ಸಿಎಂ ಯಡಿಯೂರಪ್ಪ ಸೂಚನೆ
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು ಮಳೆಯಿಂದ ಆಗುವ ಅನಾಹುತ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಮುಳುಗಡೆಯಾಗುವ ಸ್ಥಳಗಳನ್ನು ಈಗಾಗಲೇ ಗುರುತಿಸಿಸಲಾಗಿದ್ದು, ನದಿ ಪಾತ್ರದ ಜನತೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುವುದು. 20 ಜಿಲ್ಲೆಗಳ ಡಿಸಿ, ಜಿಲ್ಲಾ‌ ಉಸ್ತುವಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್​ ನಡೆಸಿ ಮಾಹಿತಿ ಪಡೆಯಲಾಗಿದೆ. ಕೇಂದ್ರ ಸರ್ಕಾರ ಎಲ್ಲಾ ನೆರವು ನೀಡುವುದಾಗಿ ಘೋಷಿಸಿದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಈ ವರ್ಷ ಮುಂಗಾರು ಬೇಗ ಆರಂಭ ಆಗಿದೆ. ಕೆರೆ ಕಟ್ಟೆಗಳು ತುಂಬುವ ಹಂತದಲ್ಲಿವೆ. ಬಿತ್ತನೆ ಕಾರ್ಯ ಆಗುತ್ತಿದೆ. ಮುಂದಾಗುವ ಅನಾಹುತಗಳ ತಪ್ಪಿಸುವಂತೆ ಎಚ್ಚರಿಕೆ ನೀಡಿದ್ದೇವೆ. ಮುಳುಗಡೆ ಪ್ರದೇಶದಲ್ಲಿರುವವರನ್ನು ಸ್ಥಳಾಂತರ ಮಾಡೋಕೆ ಸೂಚಿಸಿದ್ದೇನೆ. ಎನ್‌ಡಿಆರ್‌ಎಫ್, ಹೆಲಿಕಾಪ್ಟರ್ ವ್ಯವಸ್ಥೆಯನ್ನು ಮಾಡಿ ಕೊಟ್ಟಿರುವ ಪ್ರಧಾನಿಯವರಿಗೆ ಧನ್ಯವಾದ ತಿಳಿಸುತ್ತೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಜಿಲ್ಲೆ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಸಹಾಯವಾಣಿ ಸ್ಥಾಪನೆ, ದೂರವಾಣಿ ಮತ್ತಿತರ ಸಂಪರ್ಕ ಸಾಧನಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಬೇಕು. ತುರ್ತು ನಿರ್ವಹಣೆಗೆ ಬೇಕಾದ ಸಾಮಗ್ರಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಖರೀದಿಸಲು ಕ್ರಮ ಕೈಗೊಳ್ಳಬೇಕು. ಅಗತ್ಯ ಮೂಲಸೌಕರ್ಯಗಳುಳ್ಳ ಕಾಳಜಿ ಕೇಂದ್ರಗಳು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪ್ರವಾಹ ನಿರ್ವಹಣೆಗಾಗಿ ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು, ಸ್ವಯಂ ಸೇವಕರ ಸಹಕಾರವನ್ನು ಪಡೆದುಕೊಳ್ಳಬೇಕು. ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರವಾಹದ ಪರಿಣಾಮ ಅತ್ಯಂತ ಕಡಿಮೆಯಾಗುವಂತೆ ಕಾರ್ಯನಿರ್ವಹಿಸಬೇಕು. ಪ್ರವಾಹದ ಹಿನ್ನೆಲೆಯಲ್ಲಿ ಸ್ಥಳಾಂತರಿಸಿದ ಕೆಲವು ಗ್ರಾಮಗಳಿಗೆ ಗ್ರಾಮಸ್ಥರು ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಈ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಿ, ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಜಿಲ್ಲಾಡಳಿತಗಳ ಜತೆಗಿನ ಸಭೆಯಲ್ಲಿ ಸೂಚನೆ ನೀಡಿದರು.


Spread the love

About Laxminews 24x7

Check Also

ಖಾನಾಪೂರ ಕೋ ಆಪ್ (ಅರ್ಬನ್ ಬ್ಯಾಂಕ್)ಬ್ಯಾಂಕಿನ ಮತ ಎಣಿಕೆ ಮಂಗಳವಾರ ನಡೆಯುವ ಸಾಧ್ಯತೆ.

Spread the love ಖಾನಾಪೂರ :-ಖಾನಾಪೂರ ಕೋ ಆಪ್ ಬ್ಯಾಂಕ್ (ಅರ್ಬನ್ ಬ್ಯಾಂಕ್) ನ ಚುನಾವಣೆ ನಡೆದು ಹದಿನೈದರಿಂದ ಇಪ್ಪತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ