ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಉಗ್ರವಾದಿಗೆ ಹೋಲಿಸಿದ್ದ ಕಾಮೆಂಟ್ ಕುರಿತು ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್ ಬೇಸರ ವ್ಯಕ್ತಪಡಿಸಿದ್ದು, ಇಂತಹ ಕಾಮೆಂಟ್ ನೋಡುತ್ತಿದ್ದರೆ ನಾವು ಎಲ್ಲಿಗೆ ತಲುಪಿದ್ದೇವೆ ಎಂಬ ಅನುಮಾನ ಮೂಡುತ್ತದೆ. ಇದು ಬಹಳ ನಾಚಿಕೆಗೇಡು, ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಇರ್ಫಾನ್ ಪ್ರತಿಕ್ರಿಯೆ ಟಾಂಗ್ ನೀಡಿದ್ದಾರೆ.
ಪಠಾಣ್ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟಿ ರಿಚಾ ಚಾಧಾ, ಪಠಾಣ್ ಇದು ಫೇಕ್ ಅಕೌಂಟ್. ನಿಜವಾದ ವ್ಯಕ್ತಿ ಅಲ್ಲ ಎಂದು ಹೇಳಿದ್ದರು. ಈ ವಿಚಾರ ಟ್ವೀಟ್‍ಗೆ ಮರು ಪ್ರತಿಕ್ರಿಯೆ ನೀಡಿದ ಪಠಾಣ್, ಫೇಕ್ ಅಕೌಂಟ್ ಆದರೂ, ಯಾರೋ ಒಬ್ಬರು ಮೆಸೇಜ್ ಮಾಡಬೇಕು ಅಲ್ವಾ ಎಂದು ಹೇಳಿದ್ದರು. ಸದ್ಯ ಇಬ್ಬರ ಸಂಭಾಷಣೆ ಚರ್ಚೆಗೆ ಕಾರಣವಾಗಿದೆ. ಹಲವು ಅಭಿಮಾನಿಗಳು ಪಠಾಣ್‍ರನ್ನು ಉಗ್ರನಿಗೆ ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ನಡೆದಿದ್ದೇನು?
ಟೀಂ ಇಂಡಿಯಾ ಮಾಜಿ ಕೋಚ್ ಗ್ರೇಗ್ ಚಾಪೆಲ್ ಕಾರಣದಿಂದ ತನ್ನ ಕೆರಿಯರ್ ನಾಶವಾಯಿತು ಎಂಬ ಆರೋಪಗಳು ವಾಸ್ತವವಲ್ಲ ಎಂದು ಇತ್ತೀಚೆಗೆ ಪಠಾಣ್ ಸಂದರ್ಶನವೊಂದರಲ್ಲಿ ಹೇಳಿದ್ದರು. ತನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಆಗಲು ಸಚಿನ್ ಕಾರಣ. ರಾಹುಲ್ ದ್ರಾವಿಡ್ ಅವರಿಗೆ ಸಚಿನ್ ಈ ಸಲಹೆ ನೀಡಿದ್ದರು. ಚಾಪೆಲ್ ಭಾರತೀಯರಲ್ಲದ ಕಾರಣ ಅವರ ಮೇಲೆ ಆರೋಪ ಮಾಡಲಾಗುತ್ತಿದೆ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ನೆಟ್ಟಿಗರೊಬ್ಬರು, ಪಠಾಣ್ ಜಮಾತ್ ಉದ್ ದಾವಾ ಸಂಘಟನೆಯ ನಾಯಕ ಹಫೀಜ್ ಸಯಿದ್‍ರಂತೆ ಆಗಬೇಕೆಂದು ಬಯಸಿದಂತಿದೆ ಎಂದು ಟ್ವೀಟ್ ಮಾಡಿದ್ದರು.
ನಾನು ಉತ್ತಮವಾಗಿ ಸಿಕ್ಸರ್ ಸಿಡಿಸುವ ಸಾಮಥ್ರ್ಯ ಹೊಂದಿದ್ದೇನೆ ಎಂದು ಸಚಿನ್ ಹಾಗೂ ಅಂದು ನಾಯಕರಾಗಿದ್ದ ರಾಹುಲ್ ದ್ರಾವಿಡ್ ಅವರು ಬ್ಯಾಟಿಂಗ್ ಕ್ರಮಾಂಕದಲ್ಲಿ ಉನ್ನತಿ ನೀಡಿದ್ದರು. 2005ರ ಶ್ರೀಲಂಕಾ ವಿರುದ್ಧದ ಟೂರ್ನಿಯಲ್ಲಿ ಮೊದಲ ಬಾರಿಗೆ ಟಾಪ್ ಅರ್ಡರ್ ನಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ನೀಡಿದ್ದರು ಎಂದು ಸಂದರ್ಶನದಲ್ಲಿ ಇರ್ಫಾನ್ ಪಠಾಣ್ ಹಳೆಯ ನೆನಪನ್ನು ಮೆಲುಕು ಹಾಕಿದ್ದರು.