ಬೆಳಗಾವಿ/ಚಿಕ್ಕೋಡಿ: ಅಸ್ಸಾಂ ಗಡಿಯಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಸುನೀಲ ಸದಾಶಿವ ಖಿಲಾರೆ (36) ಮೃತ ಯೋಧ. ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದವರಾಗಿದ್ದು, ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಬಳಿಕ ಇವರನ್ನು ಗುವಾಹಾಟಿಯ ಆರ್ಮಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಸುನೀಲ ಸದಾಶಿವ ಖಿಲಾರೆ ವಿಧಿವಶರಾಗಿದ್ದಾರೆ.
ಕಳೆದ 17 ವರ್ಷಗಳಿಂದ ಸೈನಿಕ ಸೇವೆಯಲ್ಲಿದ್ದ ಇವರು ಕೊರೊನಾ ಹೆಮ್ಮಾರಿ ಹಿನ್ನೆಲೆಯಲ್ಲಿ ಕಳೆದ 3 ತಿಂಗಳುಗಳಿಂದ ಮಂಗಸೂಳಿ ಗ್ರಾಮದಲ್ಲಿದ್ದರು. ಜೂನ್ 2 ರಂದು ಅಸ್ಸಾಂಗೆ ವಾಪಸ್ ತೆರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ಸದ್ಯಕ್ಕೆ ಹುತಾತ್ಮ ಯೋಧ ಸುನೀಲ್ ಖಿಲಾರೆ ಅವರ ಪಾರ್ಥಿವ ಶರೀರ ಶನಿವಾರ ಮಂಗಸೂಳಿ ಗ್ರಾಮಕ್ಕೆ ತಲುಪುವ ಸಾಧ್ಯತೆ ಇದೆ.
ಹುತಾತ್ಮ ಯೋಧನ ತಂದೆ ಸದಾಶಿವ ಖಿಲಾರೆ ಕೂಡ ಯೋಧರಾಗಿ ನಿವೃತ್ತರಾಗಿದ್ದಾರೆ. ಇವರ ಕುಟುಂಬದಲ್ಲಿ ಎಲ್ಲರೂ ಯೋಧರಾಗಿದ್ದು, ಇವರ ಸಹೋದರ ರಾಮಚಂದ್ರ ಸದಾಶಿವ ಖಿಲಾರೆ ಗುಜರಾತಿನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹುತಾತ್ಮ ಯೋಧ ತಂದೆ-ತಾಯಿ, ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.