Breaking News

ಸುಪ್ರೀಂ ಕೋರ್ಟ್‌ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೃಷಿ ಪ್ರೀತಿ

Spread the love

ಬೆಂಗಳೂರು: ಸುಪ್ರೀಂ ಕೋರ್ಟ್‌ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ಕೆ.ಎಂ. ನಟರಾಜ್ ಅವರು ಉನ್ನತ ಹುದ್ದೆಯಲ್ಲಿದ್ದರೂ ತಮ್ಮ ಜಮೀನಿನಲ್ಲಿ ಕೃಷಿ ಮಾಡುವ ಕಾಯಕ ಮರೆತಿಲ್ಲ. ಸುಪ್ರೀಂ ಕೋರ್ಟ್‌ ರಜೆ ಅವಧಿಯಲ್ಲಿ ತಮ್ಮ ಕೃಷಿ ಪ್ರೀತಿ ಮುಂದುವರಿಸಿದ್ದಾರೆ.

ಪುತ್ತೂರು ತಾಲ್ಲೂಕಿನ ಈಶ್ವರಮಂಗಲದ ಕೊನೆತೋಟ ಮಹಾಬಲೇಶ್ವರ ನಟರಾಜ್ ಅವರು ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದು ವಕೀಲ ವೃತ್ತಿಯಲ್ಲಿ ದೇಶದಲ್ಲೇ ಹೆಸರು ಮಾಡಿದ್ದಾರೆ. ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಇವರು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ, ದಕ್ಷಿಣ ವಲಯ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

1989ರಿಂದ 1990ರ ನವೆಂಬರ್‌ ತನಕ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅವರು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಅವರ ಬಳಿಕ ಈ ಹುದ್ದೆಗೆ ಏರಿದ ಕನ್ನಡಿಗ ಎಂದರೆ ಕೆ.ಎಂ. ನಟರಾಜ್ ಅವರು.

ಸುಪ್ರೀಂ ಕೋರ್ಟ್‌ಗೆ ಸದ್ಯ ರಜೆ ಇರುವ ಕಾರಣ ಕಳೆದ ಕೆಲ ದಿನಗಳಿಂದ ತಮ್ಮ ಕುಟುಂಬ ಸಮೇತ ಹುಟ್ಟೂರು ಈಶ್ವರಮಂಗಲದಲ್ಲಿ ತಂಗಿದ್ದಾರೆ. ಇದೇ ವೇಳೆಯಲ್ಲಿ ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಸಮಯವೂ ಎದುರಾಗಿದೆ. ಮೂಲತಃ ಕೃಷಿ ಕುಟುಂಬದವರೇ ಆದ ಕೆ.ಎಂ. ನಟರಾಜ್ ಅವರು ತಮ್ಮ ಜಮೀನನಲ್ಲಿ ಕೃಷಿ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಟ್ರ್ಯಾಕ್ಟರ್‌ ಚಾಲನೆ ಮಾಡಿಕೊಂಡು ಸ್ವತಃ ಗದ್ದೆ ಉಳುಮೆ ಮಾಡುವುದು, ಕೆಸರು ಗದ್ದೆಯನ್ನು ನಾಟಿಗೆ ಹದ ಮಾಡುವ ಕಾರ್ಯದಲ್ಲಿ ನಟರಾಜ್ ರೈತನಾಗಿ ತೊಡಗಿಕೊಂಡಿದ್ದಾರೆ. ಪಂಚೆ ಕಟ್ಟಿಕೊಂಡು ಬರಿಗಾಲಿನಲ್ಲೇ ಟಿಲ್ಲರ್‌ನೊಂದಿಗೆ ಕೆಸರು ಗದ್ದೆಗೆ ಇಳಿದು ಹಳ್ಳಿಯ ಜನರು ನಾಚುವಂತೆ ದುಡಿಯುತ್ತಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಕುಟುಂಬದ ಮೂಲ ವೃತ್ತಿಯನ್ನು ಮರೆತಿಲ್ಲ.

‘ವಿದ್ಯಾವಂತರಾದ ಕೂಡಲೇ ಕೃಷಿ ಕೈಬಿಡುವ ಇಂದಿನ ಯುವಕರಿಗೆ ನಟರಾಜ್ ಅವರು ಮಾದರಿಯಾಗಿ ನಿಂತಿದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ವೃತ್ತಿಯನ್ನು ಮರೆಯಬಾರದು ಎಂಬುದನ್ನು ಯುವ ಸಮೂಹ ಇವರಿಂದ ಕಲಿಯಬೇಕು’ ಎಂದು ಸ್ಥಳೀಯರು ಹೇಳುತ್ತಾರೆ.


Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ