ಬೆಂಗಳೂರು: ಸದ್ಯಕ್ಕೆ ಬಿಎಂಟಿಸಿ ಪ್ರಯಾಣ ದರ ಏರಿಕೆ ಮಾಡುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ನಾಲ್ಕೂ ನಿಗಮಗಳು ದರ ಹೆಚ್ಚಳದ ಪ್ರಸ್ತಾವನೆ ಸಲ್ಲಿಸಿತ್ತು. ಆವಾಗ ಬಿಎಂಟಿಸಿ ದರ ಹೆಚ್ಚಳ ಮಾಡಿಲ್ಲವೆಂದು ಶೇ.15 ರಷ್ಟು ದರ ಹೆಚ್ಚಿಸುವಂತೆ ಸಂಸ್ಥೆ ಕೋರಿದೆ. ಆದರೆ ಕೋವಿಡ್ ಪರಿಸ್ಥಿತಿ, ಲಾಕ್ ಡೌನ್ ನಿಂದ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ. ಸರ್ಕಾರದ ಸಾರಿಗೆ ಬಳಸುವುದು ಬಡ ಮಧ್ಯಮವರ್ಗದ ಜನತೆಯಾದ್ದರಿಂದ, ಸಂಕಷ್ಟದಲ್ಲಿರುವ ಜನರಿಗೆ ಇನ್ನಷ್ಟು ತೊಂದರೆ ಕೊಡುವ ಕೆಲಸ ಸರ್ಕಾರ ಮಾಡುವುದಿಲ್ಲ ಎಂದು ಹೇಳಿದರು.
ಲಾಕ್‍ಡೌನ್ ಮುಗಿದ ಬಳಿಕ ಹಂತ ಹಂತವಾಗಿ ಬಸ್ ಕಾರ್ಯಾಚರಣೆ ಆರಂಭಿಸಲಾಗುವುದು. ಸಂಸ್ಥೆಯ ಸಿಬ್ಬಂದಿಗೆ ಲಸಿಕೆ ಕೊಡುವ ಕಾರ್ಯ ಆರಂಭವಾಗಿದೆ. ಎರಡೂ ಡೋಸ್ ಪಡೆದವರನ್ನು ಮಾತ್ರ ಕರ್ತವ್ಯಕ್ಕೆ ಬಳಸಲಾಗುವುದು ಎಂದು ಹೇಳಿದರು. ಲಾಕ್‍ಡೌನ್‍ನಿಂದ ಸಂಸ್ಥೆ ಸಾಕಷ್ಟು ನಷ್ಟ ಅನುಭವಿಸಿದೆ, ಹಂತ ಹಂತವಾಗಿ ಸರ್ಕಾರದ ನೆರವು ಪಡೆದು ಸಾರಿಗೆ ಸಂಸ್ಥೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡಲಾಗುವುದು ಎಂದು ಲಕ್ಷ್ಮಣ ಸವದಿ ತಿಳಿಸಿದರು.