ವಿಜಯಪುರ: ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ರಾಜಕೀಯ ಸ್ವಾರ್ಥಕ್ಕಾಗಿ ಕೋವಿಡ್ ಲಾಕ್‌ಡೌನ್ ದುರ್ಬಳಕೆ ಆಗದಿರಲಿ. ರೋಗ ನಿಯಂತ್ರಣಕ್ಕೆ ಬಂದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಲಾಕ್‌ಡೌನ್ ಹಿಂಪಡೆಯಬೇಕು ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಲಾಕ್‌ಡೌನ್ ಜೂನ್ 7ಕ್ಕೆ ಕೊನೆಗೊಳ್ಳಲಿದ್ದು, ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳಿಸಬೇಕು ಎಂದು ಯತ್ನಾಳ ಹೇಳಿದರು.
ಲಾಕ್‌ಡೌನ್ ಕಾರಣದಿಂದ ಸಾಮಾನ್ಯ, ಬಡ-ಕೂಲಿ ಕಾರ್ಮಿಕರು ಕೆಲಸ ಇಲ್ಲದೇ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಹೀಗಾಗಿ ಉದ್ಯೋಗ ಸೃಷ್ಟಿಗೂ ಸರ್ಕಾರ ಪರ್ಯಾಯ ಕ್ರಮಕ್ಕೆ ಮುಂದಾಗಬೇಕು ಎಂದರು.
ಮಠಾಧೀಶರ ಮೇಲೆ ಒತ್ತಡ: ಭ್ರಷ್ಟಾಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರ್ಚಿ ಉಳಿಸಲು ಅವರ ಪುತ್ರ ವಿಜಯೇಂದ್ರ ವೀರಶೈವ ಮಠಾಧೀಶರ ಮೇಲೆ ಒತ್ತಡ ಹೇರುತ್ತಿದ್ದಾರೆ. ಯಾವೊಬ್ಬ ಮಠಾಧೀಶರೂ ಕಳಂಕಿತರ ಪರವಾಗಿ ನಿಲ್ಲಬಾರದು ಎಂದು ಯತ್ನಾಳ ಮನವಿ ಮಾಡಿದರು.
ತಮ್ಮ ಫೇಸ್‍ಬುಕ್‍ನಲ್ಲಿ ಈ ಕುರಿತು ಬರೆದುಕೊಂಡಿರುವ ಯತ್ನಾಳ, ತಮ್ಮ ತಂದೆಯ ಸ್ಥಾನದ ಪತನದ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಅವರ ಪುತ್ರ ವಿಜಯೇಂದ್ರ ವೀರಶೈವ-ಲಿಂಗಾಯತ ಮಠಾಧೀಶರ ಮೂಲಕ ಒತ್ತಡ ಹೇರುವ ಕೆಲಸ ಆರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದ ಮೂಲಕ ರಾಜ್ಯವನ್ನು ಹಗಲು ದರೋಡೆ ಮಾಡುತ್ತಿದೆ. ಇಂತಹ ಕುಟುಂಬದಿಂದ ನಮ್ಮ ರಾಜ್ಯವನ್ನು ಮುಕ್ತಗೊಳಿಸಲು ಯಾರೂ ಆಮಿಷಕ್ಕೆ ಒಳಗಾಗಬಾರದು. ಎಂದಿಗೂ ಸಮಾಜ ಸಮಾಜಮುಖಿ ಆಗಿರಬೇಕೇ ಹೊರತು, ಹಣದ ಆಮಿಷಕ್ಕೆ ಒಳಗಾಗಬಾರದು. ಅವರ ಪರ ಹೇಳಿಕೆಯಾಗಲಿ ಅಥವಾ ಅವರ ಪರ ಲಾಬಿ ಮಾಡಬಾರದು ಎಂದು ವಿನಂತಿಸಿಕೊಂಡಿದ್ದಾರೆ.