ಉಡುಪಿ: ಭಗವಾನ್ ಶ್ರೀ ರಾಮಚಂದ್ರನ ಮಂದಿರಕ್ಕೆ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆಯಲಿದೆ. ರಾಮಮಂದಿರ ಶಿಲಾನ್ಯಾಸದ ಹಿನ್ನೆಲೆಯಲ್ಲಿ ದೇಶವ್ಯಾಪಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದೆ.
ಇಡೀ ದೇಶದ ಪವಿತ್ರ ಕ್ಷೇತ್ರಗಳ ಮಣ್ಣು ಮತ್ತು ನೀರಿನ ಸಂಗ್ರಹ ಒಂದೆಡೆ ನಡೆಯುತ್ತಿದ್ದರೆ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಶಿಲೆಯನ್ನು ಮೆರವಣಿಗೆ ಮೂಲಕ ತಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಒಪ್ಪಿಸಲಾಗಿದೆ.
ಶ್ರೀರಾಮ ಸೇನೆಯ ರಾಜ್ಯ ಮುಖಂಡ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮೆರವಣಿಗೆಯ ಮೂಲಕ ಶಿಲೆಯನ್ನು ಹೊತ್ತು ತಂದರು. ಬ್ರಹ್ಮಾವರ ತಾಲೂಕು ನೀಲಾವರ ಮಠದ ಆವರಣದಲ್ಲಿ ನಡೆದ ಧಾರ್ಮಿಕ ಆಚರಣೆಯ ನಂತರ ಶಿಲೆಯನ್ನು ಪೇಜಾವರ ಸ್ವಾಮೀಜಿ ಅವರಿಗೆ ಹಸ್ತಾಂತರ ಮಾಡಲಾಯಿತು. ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಶಿಲೆಗೆ ಅಭಿಷೇಕ ನಡೆಸಿ, ಆರತಿ ಮಾಡಿ ಸ್ವೀಕಾರ ಮಾಡಿದರು. ಅಯೋಧ್ಯೆಯ ಶ್ರೀರಾಮ ಮಂದಿರದ ಶಿಲಾನ್ಯಾಸಕ್ಕೂ ಮುನ್ನ ಈ ಶಿಲೆಯನ್ನು ಅಯೋಧ್ಯೆಗೆ ತಲುಪಿಸುವುದಾಗಿ ಭರವಸೆ ನೀಡಿದರು.
ಹನುಮಂತ ಶ್ರೀರಾಮನ ಪರಮಭಕ್ತ. ಆತ ಅವತರಿಸಿದ ಅಂಜನಾದ್ರಿ ಬೆಟ್ಟದ ಶಿಲೆಯನ್ನು ರಾಮ ಮಂದಿರದ ಶಿಲಾನ್ಯಾಸಕ್ಕೆ ಬಳಸಲಾಗುತ್ತದೆ. ಶಿಲೆಯನ್ನು ಶಿಲಾನ್ಯಾಸಕ್ಕೆ ಅರ್ಪಿಸುವ ಮೂಲಕ ಕರ್ನಾಟಕಕ್ಕೂ ರಾಮಮಂದಿರಕ್ಕೂ ಭಾವನಾತ್ಮಕ ಸಂಬಂಧ ಬೆಸೆದಂತಾಗುತ್ತದೆ. ವಿಶ್ವೇಶ ತೀರ್ಥ ಶ್ರೀಪಾದರಿಗೆ ಅಂಜನಾದ್ರಿ ಬೆಟ್ಟದಲ್ಲಿ ಸನ್ಯಾಸತ್ವ ದೀಕ್ಷೆ ಕೊಡಲಾಗಿತ್ತು.
ಮುತಾಲಿಕ್ ಮಾತನಾಡಿ, ಪೇಜಾವರಶ್ರೀಗಳು ರಾಮ ಮಂದಿರದ ದೊಡ್ಡ ಹೋರಾಟಗಾರ. ಅವರ ಶಿಷ್ಯ, ರಾಮಮಂದಿರದ ಟ್ರಸ್ಟಿ. ಅವರ ಮೂಲಕ ಶಿಲೆಯನ್ನು ರಾಮಮಂದಿರಕ್ಕೆ ಅರ್ಪಿಸುತ್ತಿದ್ದೇವೆ. ಕೋಟಿ ಕೋಟಿ ಭಕ್ತರ ಕನಸು ನನಸಾಗುತ್ತಿದೆ ಎಂದರು.