ಹೊಸದಿಲ್ಲಿ: ದೇಶದಲ್ಲಿ ಕರೆನ್ಸಿಯ ಮೌಲ್ಯ ಮತ್ತು ಪ್ರಮಾಣ 2020-21ನೇ ಸಾಲಿನಲ್ಲಿ ಕ್ರಮವಾಗಿ ಶೇ.16.8 ಹಾಗೂ ಶೇ.7.2ಕ್ಕೆ ಏರಿಕೆಯಾಗಿದೆ. 500 ರೂ., 2 ಸಾವಿರ ರೂ. ನೋಟುಗಳ ಮೌಲ್ಯ ಜತೆ ಸೇರಿ ಶೇ.85.7 ಆಗಿದೆ. 2020ರ ಮಾ.31ರಂದು ಅದರ ಪ್ರಮಾಣ ಶೇ.83.4ರಷ್ಟು ಆಗಿತ್ತು. ಗುರುವಾರ ಬಿಡುಗಡೆಯಾಗಿರುವ ಆರ್‌ಬಿಐ ವಾರ್ಷಿಕ ವರದಿಯಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. ಸೋಂಕಿನ ಹಿನ್ನೆಲೆಯಲ್ಲಿ ಬ್ಯಾಂಕ್ ನೋಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆಯಲ್ಲಿವೆ. ಎಲ್ಲಾ ರೀತಿಯ ಮೌಲ್ಯಗಳ ಬ್ಯಾಂಕ್ ನೋಟುಗಳು ಜನರಿಗೆ ಸಿಗುವಂತೆ ಮಾಡಲಾಗಿದೆ.
ಪ್ರತಿಕೂಲ ಪರಿಣಾಮದಿಂದಾಗಿ 2020-21ನೇ ವಿತ್ತೀಯ ವರ್ಷದಲ್ಲಿ ಜಗತ್ತಿನ ಅರ್ಥವ್ಯವಸ್ಥೆಗೆ ಹೇಗೆ ಧಕ್ಕೆಯಾಗಿದೆಯೋ, ಅದೇ ರೀತಿ ಭಾರತದ ಅರ್ಥ ವ್ಯವಸ್ಥೆಗೂ ಪ್ರತಿಕೂಲ ಪರಿಣಾಮ ಉಂಟಾಗಿದೆ. ಈ ಅವಧಿಯಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಾಗಿದೆ. ಈ ಅಂಶಗಳನ್ನು ಆರ್‌ಬಿಐ ವಾರ್ಷಿಕ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಜನರು ಹೆಚ್ಚಿನ ರೀತಿಯಲ್ಲಿ ವೆಚ್ಚ ಮಾಡುವುದು, ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದ ಬಂಡವಾಳ ಆಕರ್ಷಣೆ ಮಾಡುವುದು ಕೊರೊ ನೋತ್ತರ ಪರಿಸ್ಥಿತಿಯಲ್ಲಿ ಅರ್ಥ ವ್ಯವಸ್ಥೆ ಪುನರುಜ್ಜೀವನದ ಆದ್ಯತೆಯಾಗಿರಬೇಕು. ಏಕೆಂದರೆ ಅವುಗಳೆರಡು ಜಿಡಿಪಿಯ ಶೇ.85ರಷ್ಟು ಅಂಶವನ್ನು ನಿಯಂತ್ರಿಸುತ್ತವೆ ಎಂದು ಸಲಹೆ ಮಾಡಲಾಗಿದೆ. ಸೋಂಕಿನ 2ನೇ ಅಲೆಯಿಂದಾಗಿ ದೇಶದ ಅರ್ಥ ವ್ಯವಸ್ಥೆಯ ಮುನ್ನೋಟ ನಿರೀಕ್ಷೆ ಕೂಡ ಇಳಿಕೆಯಾಗಬಹುದು ಎಂದು ಆರ್‌ಬಿಐ ವರದಿ ಆತಂಕ ವ್ಯಕ್ತಪಡಿಸಿದೆ. ಬ್ಯಾಂಕ್‌ಗಳು ಕೂಡ ಅನುತ್ಪಾದಕ ಆಸ್ತಿ ಬಗ್ಗೆ ಹೆಚ್ಚಿನ ನಿಗಾ ಇರಿಸಬೇಕು ಎಂದು ಸಲಹೆ ಮಾಡಲಾಗಿದೆ.