ಬೆಂಗಳೂರು, ಮೇ 21: ರಾಜ್ಯದಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡಲು ತರ್ಕಬದ್ಧ ನೀತಿಯನ್ನು ಜಾರಿಗೊಳಿಸಿ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಮೇ 25ರಂದು ತರ್ಕಬದ್ಧವಾದ ಲಸಿಕೆ ನೀತಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ರಾಜ್ಯದಲ್ಲಿ ಕೋವಿಡ್ ಲಸಿಕೆಯ ವ್ಯಾಪಕ ಕೊರತೆಯಿದೆ ಎಂಬ ವಿಚಾರವನ್ನು ಮನಗಂಡ ಮೇಲೆ ನ್ಯಾಯಾಲಯವು ಈ ಆದೇಶ ಹೊರಡಿಸಿತು. ರಾಜ್ಯ ಸರ್ಕಾರದ ಲಿಖಿತ ಹೇಳಿಕೆಯಿಂದ ತಿಳಿಯುವುದೇನೆಂದರೆ 58,34,050 ಫಲಾನುಭವಿಗಳಿಗೆ ಎರಡನೇ ಡೋಸ್ (ಕೋವ್ಯಾಕ್ಸಿನ್) ಲಭ್ಯವಾಗಿಲ್ಲ. 4 ರಿಂದ 6 ವಾರಗಳೊಳಗೆ ಕೋವ್ಯಾಕ್ಸಿನ್ ಎರಡನೇ ಡೋಸ್ ನೀಡಬೇಕಿದೆ. ಆದರೆ, 97,440 ಡೋಸ್‌ಗಳಷ್ಟು ಕೋವ್ಯಾಕ್ಸಿನ್ ಮಾತ್ರ ಲಭ್ಯವಿದೆ ಎಂದಿತು.
60 ವರ್ಷ ತುಂಬಿದವರಿಗೂ ಲಸಿಕೆ ಸಿಗುತ್ತಿಲ್ಲ. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡಲು ಖಾಸಗಿ ವ್ಯಕ್ತಿಗಳಿಗೆ ಅವಕಾಶ ನೀಡಬಹುದೇ? ನಾವು ಆರೋಗ್ಯದ ಹಕ್ಕಿನ ಬಗ್ಗೆಯಷ್ಟೇ ವಿಚಾರಣೆ ನಡೆಸುತ್ತಿಲ್ಲ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದೇವೆ.
ಲಸಿಕೆಯ ಕೊರತೆ ಇರುವಾಗ ರಾಜ್ಯ ಸರ್ಕಾರವು ನ್ಯಾಯಯುತವಾದ ತರ್ಕಬದ್ಧ ನೀತಿಯನ್ನು ಜಾರಿಗೊಳಿಸಬೇಕು. ಈ ನೀತಿಯನ್ನು ಮುಂದಿನ ಮಂಗಳವಾರದೊಳಗಾಗಿ ಸಲ್ಲಿಸಬೇಕು” ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಕೋವಿಶೀಲ್ಡ್ ಲಸಿಕೆಯನ್ನು 6 ರಿಂದ 8 ವಾರಗಳ ಬದಲಿಗೆ 12 ರಿಂದ 16 ವಾರಗಳಲ್ಲಿ ನೀಡಬಹುದಾಗಿದೆ ಎಂಬ ತಜ್ಞರ ಸಮಿತಿ ನೀಡಿದ ವರದಿಯ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.
ಖಾಸಗಿ ಸಂಸ್ಥೆಗಳು 45 ವರ್ಷಕ್ಕಿಂತ ಕೆಳಗಿರುವವರಿಗೂ ಕೋವಿಡ್ ಮೊದಲ ಡೋಸ್ ನೀಡುತ್ತಿವೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಷ್ಟನೆ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತು. “ಮೊದಲ ಡೋಸ್ ನೀಡಲು ಖಾಸಗಿ ಸಂಸ್ಥೆಗಳಿಗೆ ಅನುಮತಿಸಬಹುದೇ? ಎಂಬ ಪ್ರಶ್ನೆ ಎದುರಾಗಿದೆ ಎಂದು ಪೀಠ ಹೇಳಿತು.
ರಾಜ್ಯದಲ್ಲಿರುವ ಹಾಸಿಗೆಗಳ ಸಂಖ್ಯೆ ಮತ್ತು ರಾಜ್ಯದಲ್ಲಿನ ಆಮ್ಲಜನಕದ ಪ್ರಮಾಣದ ಬಗ್ಗೆ ಪೀಠಕ್ಕೆ ಇದೇ ವೇಳೆ ವಿವರಣೆ ನೀಡಲಾಯಿತು. “ಇಂದಿಗೂ ರಾಜ್ಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಪೂರೈಕೆಯಾಗುತ್ತಿಲ್ಲ” ಎಂದು ಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿತು.
ಮೇ 17 ಮತ್ತು 18ರಂದು ಕೇಂದ್ರ ಸರ್ಕಾರ ಹಂಚಿಕೆ ಮಾಡಿರುವ ಕೋಟಾವನ್ನು ರಾಜ್ಯ ಸರ್ಕಾರ ಪಡೆದುಕೊಂಡಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮುಂದಿನ ವಿಚಾರಣೆಯ ವೇಳೆಗೆ ಜಿಲ್ಲಾವಾರು ಕಾಯ್ದಿರಿಸಿದ ದಾಸ್ತಾನಿನ ಕುರಿತು ದಾಖಲೆಯಲ್ಲಿ ಸಲ್ಲಿಸಬೇಕು ಎಂದು ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ರಾಜ್ಯದಲ್ಲಿ ಇನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಪಡೆಯಲು ಅತ್ಯಂತ ಕಷ್ಟದ ಪರಿಸ್ಥಿತಿ ಇದೆ ಎಂಬುದನ್ನು ಪರಿಗಣಿಸಿದ ಪೀಠವು 272 ಎಚ್‌ಡಿಯು ಹಾಸಿಗೆಗಳು, 12 ಐಸಿಯು ಹಾಸಿಗೆಗಳು ಮತ್ತು ವೆಂಟಿಲೇಟರ್ ಒಳಗೊಂಡ 7 ಐಸಿಯು ಹಾಸಿಗೆಗಳು ಲಭ್ಯವಿದೆ ಎಂಬುದನ್ನು ದಾಖಲಿಸಿಕೊಂಡಿತು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಕೀಲ ಶ್ರೀಧರ್ ಪ್ರಭು ಅವರು ಸಾರ್ವಜನಿಕರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಮಾಹಿತಿ ನೀಡಲು ರೂಪಿಸಿರುವ ವೆಬ್‌ಸೈಟಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ದತ್ತಾಂಶ ಲಭ್ಯವಾಗುತ್ತಿಲ್ಲ ಎಂದರು. ಈ ಅಂಶವನ್ನು ಪರಿಗಣಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನ್ಯಾಯಾಲಯ ಸೂಚಿಸಿತು. ಮೇ 25ಕ್ಕೆ ವಿಚಾರಣೆ ಮುಂದೂಡಲಾಗಿದೆ. (ಕೃಪೆ: ಬಾರ್ ಅಂಡ್ ಬೆಂಚ್)