ಬೆಂಗಳೂರು : ರಾಜ್ಯ ಸರ್ಕಾರವು ಕೋವಿಡ್ 19 ಸಂಬಂಧ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿರುವುದರಿಂದ ಸಾರ್ವಜನಿಕರಿಗೆ ನಷ್ಟವಾಗಿರುವುದನ್ನು ಗಮನಿಸಿ ಸರ್ಕಾರದ ವತಿಯಿಂದ ಹಲವು ವರ್ಗದವರಿಗೆ ಪರಿಹಾರ ಧನವನ್ನು ಘೋಷಿಸಲಾಗಿದ್ದು, ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಪರಿಹಾರ ಧನವಾಗಿ 3 ಸಾವಿರ ರೂ. ಗಳನ್ನು ಘೋಷಿಸಲಾಗಿದೆ.
ಸರ್ಕಾರದಿಂದ ಘೋಷಿಸಿರುವ ಪರಿಹಾರ ಧನ 3000 ರೂ. ಗಳನ್ನು ಪಡೆಯುವ ಫಲಾನುಭವಿಗಳಾದ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರು ಸರ್ಕಾರದ ಪರಿಹಾರವನ್ನು ಸೇವಾ ಸಿಂಧು ವೆಬ್ ಪೋರ್ಟ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುವುದು ಎಂದು ರಾಜ್ಯ ಸಾರಿಗೆ ಇಲಾಖೆ ಆಯುಕ್ತರು ಹೇಳಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಚಾಲನೆ ಮಾಡಲು ಚಾಲನಾ ಅನುಜ್ಞಾ ಪತ್ರ ಮತ್ತು ಬ್ಯಾಡ್ಜ್ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಫಲಾನುಭವಿಗಳು ಚಾಲ್ತಿಯಲ್ಲಿರುವ ಅನುಜ್ಞಾ ಪತ್ರದ ವಿವರಗಳನ್ನು ಸೇವಾ ಸಿಂಧೂ ಪೋರ್ಟಲ್ ನಲ್ಲಿ ನಮೂದಿಸಬೇಕು.
ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರ ಆಧಾರ್ ಕಾರ್ಡ್ ವಿವರಗಳನ್ನು ಸೇವಾ ಸಿಂಧೂ ಪೋರ್ಟಲ್ ನಲ್ಲಿ ನಮೂದಿಸಬೇಕು.
ಚಾಲಕರ ಬ್ಯಾಂಕ್ ಖಾತೆ ವಿವರ, ಐಎಫ್ ಸಿ ಕೋಡ್, ಎಂಐಸಿಆರ್ ಕೋಡ್ ತಪ್ಪದೇ ಪೋರ್ಟಲ್ ನಲ್ಲಿ ನಮೂದಿಸಬೇಕು. ಚಾಲಕರು ಚಾಲನೆ ಮಾಡುವ ವಾಹನದ ನೋಂದಣಿ ಸಂಖ್ಯೆ ವಿವರಗಳನ್ನು ಪೋರ್ಟಲ್ ನಲ್ಲಿ ನಮೂದಿಸಬೇಕು.
ಸೇವಾ ಸಿಂಧೂ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳು ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.