ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗಳು ಇಂದು ಬೆಳಗ್ಗೆ ಪಿಪಿಇ ಕಿಟ್ ಧರಿಸಿ ಸಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.
ಪಿಂಚಣಿ ಯೋಜನೆ, ಜ್ಯೋತಿ ಸಂಜೀವಿನಿ ವಿಮೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದ್ದು, ಆಸ್ಪತ್ರೆ ಹೊರ ಆವರಣದಲ್ಲಿ ಪಿಪಿಇ ಕಿಟ್ ಧರಿಸಿ ಆಗಮಿಸಿದ್ದ ಖಾಯಂ ಶುಶ್ರೂಷಕರು ಪ್ರತಿಭಟನೆ ನಡೆಸಿದರು. ಕೈಯಲ್ಲಿ ತಮ್ಮ ಬೇಡಿಕೆ ಆಗ್ರಹಿಸಿ ಪ್ರದರ್ಶನ ಫಲಕಗಳನ್ನು ಹಿಡಿದು ಪ್ರತಿಭಟನೆ ಮಾಡಿದರು.
ಸರ್ಕಾರ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಲವು ದಿನಗಳಿಂದ ಸಿಬ್ಬಂದಿ ಮನವಿ ಮಾಡಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ನೂತನ ಪಿಂಚಣಿ ಯೋಜನೆ (ಎನ್‍ಪಿಎಸ್) ಯಲ್ಲಿ ಶುಶ್ರೂಷಕರ ವೇತನ ಕಡಿತ ಮಾಡಲಾಗಿತ್ತು. ಆದರೆ ಈಗ ಏಕಾಏಕಿ ಯೋಜನೆಯನ್ನು ನಿಲ್ಲಿಸಲಾಗಿದ್ದು, ಹಣವನ್ನು ಮರುಪಾವತಿ ಮಾಡಿಲ್ಲ. ಬೇರೆ ಸ್ವಯತ್ತ ಸಂಸ್ಥೆಗಳಲ್ಲಿನ ಸಿಬ್ಬಂದಿಗೆ ಹಣ ಬರುತ್ತಿದೆ ಎಂಬುವುದು ಸಿಬ್ಬಂದಿಯ ಆರೋಪವಾಗಿದೆ. ಉಳಿದಂತೆ ಜ್ಯೋತಿ ಸಂಜೀವಿನಿ ಆರೋಗ್ಯ ವ್ಯವಸ್ಥೆಗೆ ಜಾರಿ ಹಾಗೂ ಪ್ರೋತ್ಸಾಹ ಭತ್ಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.