ಉಡುಪಿ: ಸ್ವಾಮೀಜಿ ಅಂದರೆ ಪೂಜೆ ಪುನಸ್ಕಾರ ಮಾಡುತ್ತಾರೆ. ಪಾಠ ಪ್ರವಚನ ಮಾಡಿ ಮಠದಲ್ಲಿ ಇರುತ್ತಾರೆ. ಲೋಕ ಸಂಚಾರ ಮಾಡಿ ಧರ್ಮ ಜಾಗೃತಿ ಮೂಡಿಸುತ್ತಾರೆ. ಆದರೆ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಇದೆಲ್ಲ ಮಾಡುವ ಜೊತೆಗೆ ಕೃಷಿ, ಹೈನುಗಾರಿಕೆಯಲ್ಲೂ ಪಾಲ್ಗೊಳ್ಳುತ್ತಾರೆ.
ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿಭಿನ್ನ ಅಭಿರುಚಿಯ ಸ್ವಾಮೀಜಿ. ಸನ್ಯಾಸದ ಜೊತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ನೀಲಾವರ ಗೋಶಾಲೆಯ ಆವರಣದಲ್ಲಿ ಹೆಬ್ಬಾವಿನ ಮರಿಯೊಂದು ಕಾಣಿಸಿಕೊಂಡಿದೆ. ಈ ಹಾವನ್ನು ಸರಳವಾಗಿ ಯಾವುದೇ ಅಪಾಯವಿಲ್ಲದೇ ಹಿಡಿಯುವ ವಿಧಾನ ವಿವರಿಸಿ, ಪ್ರಾತ್ಯಕ್ಷಿಕೆ ಮಾಡಿ ಪೇಜಾವರಶ್ರೀ ಎಲ್ಲರ ಹುಬ್ಬೇರಿಸಿದ್ದಾರೆ. ಪೇಜಾವರ ಶ್ರೀಗಳ ಸಾಹಸವನ್ನು ಅವರ ಶಿಷ್ಯರು ಸಹಜ ಕುತೂಹಲದಿಂದ ಕಂಡು ಅಚ್ಚರಿಪಟ್ಟಿದ್ದಾರೆ.
ತೆಂಗಿನ ಮರದ ಗರಿಯ ಕಡ್ಡಿಯಲ್ಲಿ ಹಾವು ಹಿಡಿಯುವ ಪ್ರಕ್ರಿಯೆ ಎಲ್ಲರ ಸಹಜ ಕುತೂಹಲಕ್ಕೆ ಕಾರಣವಾಗಿದೆ. ಪೇಜಾವರಶ್ರೀ ಸುಲಲಿತವಾಗಿ ಹಾವು ಹಿಡಿದು ಗೋಣಿಚೀಲಕ್ಕೆ ತುಂಬಿಸುವ ಸಂದರ್ಭ ಗೋಣಿ ಹಿಡಿದ ಶಿಷ್ಯ ಭಯದಲ್ಲಿ ಗಲಿಬಿಲಿಗೊಂಡ ಪರಿಯೂ ವಿಡಿಯೋದಲ್ಲಿ ಸೆರೆಯಾಗಿದೆ. ಹಾಗಂತ ವಿಷಕಾರಿ ಹಾವುಗಳನ್ನು ಹಿಡಿಯದಿರಿ. ತಜ್ಞರನ್ನು ಸಂಪರ್ಕ ಮಾಡಿ ಎಂದು ಪೇಜಾವರಶ್ರೀ ಹೇಳಿದ್ದಾರೆ.