ಧಾರವಾಡ: ಅವರು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸಹೋದರರು. ಆದರೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮ್‌ಹೊಂಗಲ್ ಗ್ರಾಮದಲ್ಲಿ ಜೀವನೋಪಾಯಕ್ಕೆ ಪಾತ್ರೆ ಅಂಗಡಿ ಇಟ್ಟಿದ್ದರು. ಕೌದಿ ಹೊಲೆಯೋ ಕೆಲಸ ಸಹ ಮಾಡುತ್ತಿದ್ದರು. ಅದರಿಂದಲೇ ಜೀವನದಲ್ಲಿ ಮುಂದೆ ಬಂದು ಕೋಟ್ಯಾಧೀಶರಾಗಿದ್ದರು. ಸುಮಾರು 80 ಎಕರೆ ಭೂಮಿಯ ಒಡೆಯರಾಗಿದ್ದರು. ಬದುಕು ಸುಂದರವಾಗಿ ನಡೆದಿದೆ ಅಂದುಕೊಳ್ಳುತ್ತರುವ ಹೊತ್ತಿನಲ್ಲೇ ಬಾಗಲೆ ಮನೆಯ ಬಾಗಿಲಿಗೆ ಕೊರೊನಾ ಮಾರಿ ವಕ್ಕರಿಸಿಬಿಟ್ಟಿದೆ. ಮೊದಲು ಆ ಮನೆಯಲ್ಲಿ ನಾಲ್ಕು ದಿನಗಳ ಅಂತರದಲ್ಲಿ ಅಣ್ಣ-ತಮ್ಮ ವಿಧಿವಶರಾಗಿದ್ದರೆ ಹಿರಿಯ ಅಣ್ಣಗೂ ಸೋಂಕು ತಗುಲಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಶಿವಾಜಿ ಬಾಗಲೆ (56) ಮತ್ತು ದುರಗಪ್ಪ ಬಾಗಲೆ (50) ಒಂದೇ ಮನೆಯಲ್ಲಿ ಕೊರೊನಾ ಕಾಟದಿಂದ ನಾಲ್ಕು ದಿನಗಳ ಅಂತರದಲ್ಲಿ ಸಾವಿಗೀಡಾದ ಅಣ್ಣ-ತಮ್ಮಂದಿರು. ಇನ್ನು ಹಿರಿಯ ಅಣ್ಣ ಗಂಗಾರಾಮ್ ಕೊರೊನಾದೊಂದಿಗೆ ಭಾರೀ ಯುದ್ಧವನ್ನೇ ನಡೆಸಿದ್ದಾರೆ.
ಇದೆಲ್ಲಾ ಆರಂಭವಾಗಿದ್ದು, ಮೊದಲಿಗೆ ತಾಯಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ. ಚಿಕಿತ್ಸೆಯಿಂದ ತಾಯಿ ಗುಣಮುಖರಾದರು. ಆದರೆ ತಾಯಿಯಿಂದ ಉಳಿದವರಿಗೆ ಸೋಂಕು ಹತ್ತಿದೆ. ಅದರ ಪರಿಣಾಮ ಮೇ 13 ರಂದು ಶಿವಾಜಿ ಮೃತಪಟ್ಟಿದ್ದರೆ ಮೇ 16 ರಂದು ಲಕ್ಷ್ಮಣ ಬಾಗಲೆ ಕೊನೆಯುಸಿರೆಳೆದಿದ್ದಾರೆ.