ಬೆಂಗಳೂರು,:- ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಕ್ತಿಸೌಧದಲ್ಲಿ ಸೇಫ್ ಪ್ರೋ ಎಂಬ ಹೈಟೆಕ್ ಯಂತ್ರವನ್ನು ಅಳವಡಿಸಲಾಗಿದೆ.
ಕಳೆದ ತಿಂಗಳು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮಾಸ್ಕ್ ಧರಿಸಿರಲಿಲ್ಲ ಅನ್ನೋ ಕಾರಣಕ್ಕೆ ವಿಧಾನಸೌಧದ ಪ್ರವೇಶಕ್ಕೆ ಈ ಸಿಬ್ಬಂದಿ ಅನುಮತಿ ನೀಡದ ಘಟನೆ ನಡೆದಿತ್ತು. ಆದರೆ ಈಗ ವಿಧಾನಸೌಧಕ್ಕೆ ಸೇಫ್ ಪೆÇ್ರೀ. ಹೈಟೆಕ್ ಯಂತ್ರವೊಂದು ಬಂದಿದೆ.
ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಈ ಹೈಟೆಕ್ ಯಂತ್ರವನ್ನು ಇಡಲಾಗಿದ್ದು, ಇದು ಸೌಧಕ್ಕೆ ಬರುವವರ ದೇಹದ ತಾಪಮಾನ ಹೇಳುತ್ತೆ. ಸ್ಯಾನಿಟೈಸ್ ಮಾಡುತ್ತದೆ.
ಈ ಯಂತ್ರದ ವಿಶೇಷ ಏನಂದರೆ, ಮಾಸ್ಕ್ ಧರಿಸಿಯೇ ಇದರ ಮುಂದೆ ನಿಲ್ಲಬೇಕು. ಅಂದಾಗ ಮಾತ್ರ ಥರ್ಮಲ್ ಸ್ಕ್ರೀನಿಂಗ್ ಮಾಡಿ ದೇಹದ ತಾಪಮಾನ ಹೇಳುತ್ತದೆ. ಜೊತೆಗೆ ಸ್ಯಾನಿಟೈಸರ್ ಮಾಡುತ್ತದೆ. ಮಾಸ್ಕ್ ಇಲ್ಲದಿದ್ದರೆ ಮಾಸ್ಕ್ ಧರಿಸಿ ಎಂದೂ ಸೂಚಿಸುತ್ತದೆ. ಇದರಿಂದ ಸ್ಯಾನಿಟೈಸ್ ಹಾಕುವ ಮತ್ತು ಗನ್ ಹಿಡಿದು ಸ್ಕ್ರೀನಿಂಗ್ ಮಾಡುವ ಕಷ್ಟದ ಕೆಲಸ ತಕ್ಕಮಟ್ಟಿಗೆ ಕಡಿಮೆಯಾಗಿದೆ.
ಈ ಹೈಟೆಕ್ ಯಂತ್ರವನ್ನು ಇದೀಗ ಪ್ರಾಯೋಗಿಕವಾಗಿ ಇಡಲಾಗಿದೆ. ಇದು ಯಶಸ್ವಿಯಾದರೆ ಸರ್ಕಾರಿ ಇಲಾಖೆಯ ಎಲ್ಲ ಕಚೇರಿಗಳಲ್ಲೂ ಈ ಯಂತ್ರವನ್ನು ಬಳಸುವ ಚಿಂತನೆ ಸರ್ಕಾರದ ಮುಂದಿದೆ.
ವಿಧಾನಸೌಧದ ಕಚೇರಿಗಳಷ್ಟೇ ಅಲ್ಲ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗೆ ಕೊರೋನಾ ಸೋಂಕಿನ ಭಯ ಶುರುವಾಗಿದೆ. ಪೊಲೀಸ್ ಇಲಾಖೆಯನ್ನೂ ಒಳಗೊಂಡಂತೆ ಬಹಳಷ್ಟು ಸರ್ಕಾರಿ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಈ ನೂತನ ಯಂತ್ರವು ಉಪಯುಕ್ತವೆನಿಸುವ ನಿರೀಕ್ಷೆ ಇದೆ.
ಈಗಾಗಲೇ ವಿಧಾನಸೌಧದ ಎಲ್ಲ 10 ದ್ವಾರಗಳಲ್ಲೂ ಆಗಮಿಸುವ ಪ್ರತಿಯೊಬ್ಬರಿಗೂ ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್‍ನ್ನು ಸತತವಾಗಿ ಮಾಡಲಾಗುತ್ತಿರುತ್ತದೆ.
ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸ್ ಮಾಡೋದಷ್ಟೇ ಅಲ್ಲ, ಮಾಸ್ಕ್ ಧರಿಸಿದ್ದಾರೋ ಇಲ್ಲವೋ ಅನ್ನೋದನ್ನು ಈ ಸಿಬ್ಬಂದಿ ಪರಿಶೀಲನೆ ಮಾಡುತ್ತಾರೆ.ಮಾಸ್ಕ್ ಧರಿಸದಿದ್ದರೆ ಅಂಥವರನ್ನು ವಿಧಾನಸೌಧದ ಒಳಗಡೆ ಬಿಡುವುದಿಲ್ಲ. ಈಗ ಸೇಫ್ ಪ್ರೋ ಯಂತ್ರ ಸಿಬ್ಬಂದಿಯ ಕೆಲಸವನ್ನು ಕಡಿಮೆ ಮಾಡಲಿದೆ.