ಬೆಂಗಳೂರು, ಮೇ 13; ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಭಾರೀ ಆಘಾತವನ್ನು ಉಂಟು ಮಾಡಿದೆ. ಸರ್ಕಾರ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ 14 ದಿನಗಳ ಲಾಕ್‌ಡೌನ್ ಘೋಷಣೆ ಮಾಡಿದೆ. ಪರಿಹಾರ ಕಾರ್ಯಗಳಿಗಾಗಿ ಸಚಿವರ ವೇತನವನ್ನು ಪರಿಹಾರ ನಿಧಿಗೆ ನೀಡಲಾಗುತ್ತದೆ.
ಗುರುವಾರ ಕರ್ನಾಟಕ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಸಂಪುಟದ 32 ಸಚಿವರು ಒಂದು ವರ್ಷದ ವೇತನವನ್ನು ಕೋವಿಡ್ -19 ಪರಿಹಾರ ನಿಧಿಗೆ ನೀಡಲಿದ್ದಾರೆ.
ಬಿ. ಎಸ್. ಯಡಿಯೂರಪ್ಪ ಸೂಚನೆಯ ಹಿನ್ನಲೆಯಲ್ಲಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ಮೇ 1ರಿಂದಲೇ ಜಾರಿಗೆ ಬರುವಂತೆ ಒಂದು ವರ್ಷದ ವೇತನ ಪರಿಹಾರ ನಿಧಿಗೆ ಹೋಗಲಿದೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಈ ಹಣವನ್ನು ಪರಿಹಾರ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಕಳೆದ ವರ್ಷ ಯಡಿಯೂರಪ್ಪ ಅವರು ತಮ್ಮ ಒಂದು ವರ್ಷದ ಪೂರ್ಣ ವೇತನವನ್ನು ಪರಿಹಾರ ನಿಧಿಗೆ ನೀಡಿದ್ದರು.
ಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ಮಾಸಿಕ ವೇತನದ ಹೊರತಾಗಿ ಭತ್ಯೆ ದೊರೆಯುತ್ತದೆ. ಮನೆ ಬಾಡಿಗೆಗಾಗಿ 1 ಲಕ್ಷ, ಇಂಧನಕ್ಕಾಗಿ 1000 ಕಿ. ಮೀ. ತನಕ ಭತ್ಯೆ, 10 ಲಕ್ಷ ರೂ. ತನಕ ಪಿಠೋಪಕರಣ ಖರೀದಿಗಾಗಿ ಭತ್ಯೆ ಸಿಗಲಿದೆ.
ಈಗ ಸಚಿವರ ಒಂದು ವರ್ಷದ ವೇತನವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಲು ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ನಿರ್ವಹಣೆ ಸರ್ಕಾರಕ್ಕೆ ಸವಾಲಾಗಿದೆ. ಪ್ರತಿದಿನ ರಾಜ್ಯದಲ್ಲಿ 30 ಸಾವಿರಕ್ಕೂ ಅಧಿಕ ಹೊಸ ಪ್ರಕರಣ ದಾಖಲಾಗುತ್ತಿದೆ.
Laxmi News 24×7