ಹುಬ್ಬಳ್ಳಿ: ದೇಶದಲ್ಲಿ ಕೊರೊನಾ ಎರಡನೇ ಅಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೆ ಸೋಂಕಿನ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿವೆ. ಇದಕ್ಕೆ ಬೆಂಬಲವಾಗಿ ರೈಲ್ವೆ ಇಲಾಖೆಯೂ ಸಹ ಕೈ ಜೋಡಿಸಿದ್ದು, ರೈಲ್ವೆ ಬೋಗಿಗಳನ್ನು ಇದೀಗ ಮತ್ತೇ ಐಸೋಲೇಷನ್ ವಾರ್ಡ್ಗಳಾಗಿ ಪರಿವರ್ತಿಸಲಾಗುತ್ತಿದೆ. ಇಡೀ ದೇಶವೇ ಆತಂಕಕ್ಕೆ ತಳ್ಳಿದ ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಅನೇಕ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
ದೇಶದೆಲ್ಲೆಡೆ ಯಾವುದೇ ರೀತಿಯಲ್ಲಿ ಕೊರೊನಾ ಕಾರ್ಮೋಡ ಪಸರಿಸಬಾರದು ಎಂಬ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಆದರೂ ಈಗಾಗಲೇ ದೇಶ ಹಾಗೂ ರಾಜ್ಯದ ಗಲ್ಲಿ ಗಲ್ಲಿಗಳಲ್ಲಿ ನುಗ್ಗಿ ಜನರ ಜೀವವನ್ನು ಬಲಿ ತೆಗೆದುಕೊಳ್ಳುತ್ತಿದೆ. ಕೊರೊನಾ ರೋಗಿಗಳಿಗೆ ಬೆಡ್ ಸಿಗದೆ ಸಾವನ್ನಪ್ಪುತ್ತಿರುವುದು ವರದಿಯಾಗುತ್ತಿವೆ. ಈ ಮಧ್ಯೆ ಬೆಡ್ ಸಮಸ್ಯೆ ನೀಗಿಸಲು ಮತ್ತೊಮ್ಮೆ ಕಳೆದ ವರ್ಷದಂತೆ ಸೌತ್ ವೆಸ್ಟರ್ನ್ ರೈಲ್ವೆ ಪಣ ತೊಟ್ಟಿದೆ.
ಮಹತ್ವದ ಕಾರ್ಯಕ್ಕೆ ರೈಲ್ವೆ ಇಲಾಖೆಯೂ ಕೈಜೋಡಿಸಲು ಸಿದ್ದವಾಗಿದೆ. ಕೊರೊನಾ ಎರಡನೇ ಅಲೆಯಿಂದಾಗಿ ದೇಶದೆಲ್ಲೆಡೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿತರ ಚಿಕಿತ್ಸೆ ದೃಷ್ಟಿಯಿಂದ ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ಸನ್ನದ್ಧವಾಗುತ್ತಿದೆ. ರಾಜ್ಯ ಹಾಗೂ ದೇಶದಲ್ಲಿನ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್ಗಳ ಕೊರತೆ ನೀಗಿಸುವುದಕ್ಕೆ ರೈಲ್ವೆ ಕೋಚ್ಗಳನ್ನು ಮತ್ತೇ ಐಸೋಲೇಷನ್ ವಾರ್ಡ್ಗಳನ್ನಾಗಿ ಪರಿವರ್ತನೆ ಮಾಡುವ ಮೂಲಕ ರೈಲ್ವೆ ಇಲಾಖೆ ಮಹತ್ವದ ಕಾರ್ಯಕ್ಕೆ ಮುಂದಾಗಿದೆ.
ಕೊರೊನಾ ಮೊದಲ ಅಲೆಯ ವೇಳೆಯಲ್ಲಿ ಹುಬ್ಬಳ್ಳಿಯ ರೈಲ್ವೆ ವರ್ಕ್ ಶಾಪ್ನಲ್ಲಿ 96 ಕೋಚ್ಗಳು ಸೇರಿದಂತೆ ಇಲಾಖೆಯ ವ್ಯಾಪ್ತಿಯಲ್ಲಿ 312 ಕೋಚ್ಗಳನ್ನು ಐಸೋಲೇಶನ್ ವಾರ್ಡ್ಗಳನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಅದೇ ರೀತಿ ಇದೀಗ ಮತ್ತೆ 280 ಕೋಚ್ಗಳನ್ನು ಐಸೋಲೇಶನ್ ವಾರ್ಡ್ಗಳನ್ನಾಗಿ ಪರಿವರ್ತನೆ ಮಾಡುತ್ತಿದೆ.
ಪ್ರಮುಖವಾಗಿ ಸೌಥ್ ವೆಸ್ಟರ್ನ್ ರೈಲ್ವೆ ಇಲಾಖೆಯ ವ್ಯಾಪ್ತಿಯಲ್ಲಿ ಕಳೆದ ವರ್ಷ 312 ರೈಲ್ವೆ ಕೋಚ್ಗಳನ್ನು ಪರಿವರ್ತನೆ ಮಾಡಲಾಗಿತ್ತು. ಅಲ್ಲದೆ ಹುಬ್ಬಳ್ಳಿಯಲ್ಲಿ 96 ಕೋಚ್ಗಳನ್ನು ಐಸೋಲೇಶನ್ಗಳಾಗಿ ಮಾರ್ಪಾಡು ಮಾಡಲಾಗಿತ್ತು. ಆದರೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಕಾಣದ ಹಿನ್ನೆಲೆಯಲ್ಲಿ ಯಾವುದೇ ಐಸೋಲೇಶನ್ ಕೋಚ್ ಚಿಕಿತ್ಸೆಗೆ ಬಳಕೆಯಾಗಿರಲಿಲ್ಲ. ಆದರೆ ಇದೀಗ ಕೊರೊನಾ ಎರಡನೇ ಅಲೆಯು ಮತ್ತೇ ಅಪ್ಪಳಿಸಿದ್ದು, ರೈಲ್ವೆ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಮತ್ತೇ 280 ಕೋಚ್ಗಳನ್ನು ಐಸೋಲೇಶನ್ ವಾರ್ಡ್ಗಳನ್ನಾಗಿ ತಯಾರು ಮಾಡಿದೆ. ಒಂದು ಕೋಚ್ನಲ್ಲಿ 16 ಜನರಿಗೆ ಚಿಕಿತ್ಸೆ ಎಂಬಂತೆ ಇಲ್ಲಿ ಐಸೋಲೇಶನ್ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದರು.