ಬೆಂಗಳೂರು (ಏ. 24): ಕೊರೋನಾ ಎರಡನೇ ಅಲೆ ತಜ್ಞರು ಅಂದಾಜಿಸಿದ್ದಕ್ಕಿಂತ ಸಾಕಷ್ಟು ಕ್ರೂರವಾಗಿದೆ. ಸೋಂಕಿನ ಹರಡುವಿಕೆ ಅಂದಾಜಿಗೆ ಸಿಗದಾಗಿದ್ದು, ದಿನನಿತ್ಯ ಸಾವಿರಾರು ಜನರು ಸೋಂಕಿನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ದೇಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಕೂಡ ಎದುರಾಗಿದೆ. ಜನರ ರಕ್ಷಣೆ ಮಾಡಬೇಕಾದ ವೈದ್ಯರು ಸೇರಿದಂತೆ ಅನೇಕ ಕೊರೋನಾ ವಾರಿಯರ್ಗಳು ಸೋಂಕಿನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ. ಸಿಲಿಕಾನ್ ಸಿಟಿಯಲ್ಲಿ ಸ್ವಾಬ್ ಕಲೆಕ್ಟರ್ರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮರ್ಸಿಟೌನ್ ಗೀತಾ (35) ಆಸ್ಪತ್ರೆಯಲ್ಲಿ ಸಕಾಲಕ್ಕೆ ಬೆಡ್ ಸಿಗದೇ ಸಾವನ್ನಪ್ಪಿದ್ದಾರೆ. ನಾಲ್ಕು ಐದು ಆಸ್ಪತ್ರೆಗೆ ಓಡಾಡಿದರೂ ಸೂಕ್ತ ಸಮಯದಲ್ಲಿ ಬೆಡ್ ಸಿಗದೇ ಕಡೆಗೆ ಆಕ್ಸಿಜನ್ ಮಟ್ಟ ಕಡಿಮೆಯಾಗಿ ನರಳಿ ಪ್ರಾಣ ಬಿಟ್ಟಿದ್ದಾರೆ ಕೊರೋನಾ ವಾರಿಯರ್ ಗೀತಾ. ಕಳೆದ ಒಂದು ವಾರದ ಹಿಂದೆ ಗೀತಾಗೆ ಕೊರೋನಾ ಸೋಂಕು ದೃಢವಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ಅವರಿಗೆ ಬೆಡ್ ಸಿಕಿರಲಿಲ್ಲ. ನಾಲ್ಕು ಐದು ಆಸ್ಪತ್ರೆಗಳಲ್ಲಿಯೂ ಅವರಿಗೆ ಬೆಡ್ ಸಿಕ್ಕಿಲ್ಲ. ಕಡೆಗೆ ನಾಲ್ಕು ಗಂಟೆಗಳ ಕಾಲ ಕಾದ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿತ್ತು. ಈ ವೇಳೆ ಅವರಿಗೆ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿದ್ದು, ಕಡೆಗೆ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಪ್ರಾಣ ಬಿಟ್ಟಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರಾಜಧಾನಿಯಲ್ಲಿ ಎಲ್ಲೆಡೆ ಬೆಡ್ ಹಾಗೂ ಆಕ್ಸಿಜನ್ ಸಮಸ್ಯೆ ಉದ್ಭವಿಸಿದೆ. ಸೂಕ್ತ ಸಮಯದಲ್ಲಿ ಬೆಡ್ ಸಿಗದ ಹಿನ್ನಲೆ ಸೋಂಕಿತರು ಪರದಾಡುವಂತೆ ಆಗಿದೆ. ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳು ಇದೇ ಸ್ಥಿತಿ ಮುಂದುವರೆದಿದೆ. ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಬೆಡ್ ಅಲಭ್ಯತೆಯಿಂದಾಗಿ ಸರಿಯದ ಕಾಲಕ್ಕೆ ಚಿಕಿತ್ಸೆ ಸಿಗದೇ ಜನರು ಕಂಗಲಾಗಿದ್ದಾರೆ. ಈ ನಡುವೆ ಸೋಂಕಿತರ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದ್ದು, ಚಿತಾಗಾರದ ಮುಂದೆ ಸೋಂಕಿತರ ಸಾಲು ಹೆಚ್ಚುತ್ತಲೇ ಇದೆ.
ರಾಜಧಾನಿಯಲ್ಲಿ ಬೆಡ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆ ಖಾಸಗಿ ಖಾಸಗಿ ಆಸ್ಪತ್ರೆಗಳಲ್ಲಿನ ಶೇ. 50ರಷ್ಟು ಹಾಸಿಗೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಂಟಿ ಕಾರ್ಯಾಚರಣೆ ನಡೆಸುವಂತೆ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಡ್ ಕೊರತೆ ಹಿನ್ನಲೆ ಸರ್ಕಾರ ಮಿನಿ ಹಾಸ್ಪಿಟಲ್ ತುರ್ತಾಗಿ ನಿರ್ಮಿಸಲು ನಿರ್ಧರಿಸಿದೆ. ಚಿಕಿತ್ಸೆಗೆ ಬೆಡ್, ಆಕ್ಸಿಜನ್ ಸಿಗದೆ ರೋಗಿಗಳು ಆಸ್ಪತ್ರೆಗಳಿಗೆ ಅಲೆದಾಡಿ ಪ್ರಾಣಬಿಡುತ್ತಿದ್ದಾರೆ. ಗುಣಲಕ್ಷಣವಿಲ್ಲದವರಿಗೆ ಬಿಬಿಎಂಪಿ 10 ಕೊರೋನಾ ಕೇರ್ ಸೆಂಟರ್ ತೆರೆಯಲಾಗಿದೆ. ಆದರೆ ಗುಣಲಕ್ಷಣವಿದ್ದು ಆಕ್ಸಿಜನ್ ಅಗತ್ಯವಿರುವ ಸೋಂಕಿತರಿಗೆ ಬೆಡ್ ಸಾಲುತ್ತಿಲ್ಲ. ಈ ಕಾರಣಕ್ಕೆ ಸರ್ಕಾರ ಖಾಸಗಿ ಅಸ್ಪತ್ರೆಗಳು ಹಾಗೂ ಹೋಟೆಲ್ಗಳ ಸಹಕಾರದೊಂದಿಗೆ ಮಿನಿ ಆಸ್ಪತ್ರೆ ಶುರು ಮಾಡುತ್ತಿದೆ.ಕೊರೋನಾ ಗುಣಲಕ್ಷಣ ಇರುವ ರೋಗಿಗಳಿಗೆ, ಸಣ್ಣ ಪ್ರಮಾಣದ ಆಕ್ಸಿಜನ್ ಅಗತ್ಯವಿರುವವರಿಗೆ, ನಿಶ್ಶಕ್ತರಾಗಿ ಅಸ್ವಸ್ಥರಾದವರಿಗೆ ಡ್ರಿಪ್ ಹಾಕಿಸಿಕೊಳ್ಳಲು ಮಿನಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗುತ್ತದೆ
ಆಕ್ಸಿಜನ್ ಸಮಸ್ಯೆ ಕಾಡುತ್ತಿರುವ ಹಿನ್ನೆಲೆ ಸರ್ಕಾರ ಕೂಡ ಕಟ್ಟು ನಿಟ್ಟಿನ ಕ್ರಮ ವಹಿಸಿದ್ದು, ಈ ಕುರಿತು ಉನ್ನತಮಟ್ಟದ ಸಭೆ ನಡೆಸಲಾಗಿದೆ. ಸುಮಾರು 800 ಮೆಟ್ರಿಕ್ ಟನ್ ಆಕ್ಸಿಜನ್ ಸರಬಾರಜು ಆಗುತ್ತಿದೆ. ಪ್ರತಿನಿತ್ಯ ಬೇಡಿಕೆ ಹೆಚ್ಚಾಗುತ್ತಿದೆ. ಚೀಫ್ ಸೆಕ್ರೆಟರಿ ಆಕ್ಸಿಜನ್ ಉತ್ಪಾದಕರ ಬಳಿ ಮಾತನಾಡಿ ಹೆಚ್ಚುವರಿ ಆಕ್ಸಿಜನ್ ಪಡೆದುಕೊಂಡಿದ್ದೇವೆ. ನಮ್ಮ ಪವರ್ ಪ್ಲ್ಯಾಟ್ ನಲ್ಲೂ ಆಕ್ಸಿಜನ್ ಉತ್ಪಾದನೆ ಮಾಡುತ್ತಿದ್ದೇವೆ. ಕೆಲವು ಸಿಮೆಂಟ್ ಫ್ಯಾಕ್ಟರಿಗಳಲ್ಲೂ ಉತ್ಪಾದನೆ ಆಗಿದ್ದನ್ನು ಮೆಡಿಕಲ್ ಉದ್ದೇಶಕ್ಕೆ ಬಳಸುತ್ತೇವೆ. ಒಟ್ಟಾರೆ ನಮ್ಮ ಪ್ರಯತ್ನ ಮಾಡಿ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.