ಶಿವಮೊಗ್ಗ: ವೀಕೆಂಡ್ ಕರ್ಫ್ಯೂ ನಿಂದಾಗಿ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಅನ್ನ ಮತ್ತು ನೀರಿಗಾಗಿ ನಿರ್ಗತಿಕರು, ಭಿಕ್ಷುಕರು ಪರದಾಟ ನಡೆಸಿದ್ದು, ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವೀಕೆಂಡ್ ಕರ್ಫ್ಯೂ ಇರುವುದರಿಂದ ನಗರದಲ್ಲಿ ಎಲ್ಲಾ ಹೋಟೆಲ್ ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದು ಇಂತಹ ಸಂದರ್ಭದಲ್ಲಿ ನಿರ್ಗತಿಕರಿಗೆ ತೊಂದರೆಯಾಗುವುದನ್ನು ಮನಗಂಡ ಯುವ ಕಾಂಗ್ರೆಸ್ ಕಾರ್ಯಕರ್ತರು ಊಟದ ಪ್ಯಾಕೆಟ್ ಮತ್ತು ನೀರಿನ ಬಾಟಲಿಯನ್ನು ವಿತರಿಸಿದ್ದಾರೆ.
ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿ ನಿರ್ಗತಿಕರು ಇರುವ ಸ್ಥಳಕ್ಕೆ ಹೋಗಿ ಊಟ, ನೀರು ಕೊಡುವ ಮೂಲಕ ಮಾನವೀಯತೆ ತೋರಿದ್ದಾರೆ. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಬಿ. ಲೋಕೇಶ್ ಸೇರಿದಂತೆ ಹಲವರು ಇದ್ದರು.
Laxmi News 24×7