ಬೆಂಗಳೂರು: ಕಳೆದ ಒಂದು ವಾರದಲ್ಲಿ 15 ಪಟ್ಟು ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದರೆ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಂತೆ ಕಾಣುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಗಂಭೀರತೆ ಬಗ್ಗೆ ಇಷ್ಟು ದಿನ ನಾನೂ ಮಾಧ್ಯಮಗಳಲ್ಲಿ ನೋಡುತ್ತಿದ್ದೆ. ಇಂದು ಸ್ವತ: ಖುದ್ದಾಗಿ ಬಂದು ಪರಿಸ್ಥಿತಿ ಗಮನಿಸುತ್ತಿದ್ದೇನೆ. ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತು ಗಂಭೀರವಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಕಳೆದ ಹತ್ತು ದಿನಗಳ ಹಿಂದೆ ಥಿಯೇಟರ್ ಗಳನ್ನು, ಜಿಮ್ ಗಳನ್ನು ಬಂದ್ ಮಾಡಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ ಚಿತ್ರೋದ್ಯಮದವರು, ಜಿಮ್ ನವರು ಧಮ್ಕಿ ಹಾಕಿದರು. ಯಾರೋ ಸೆಲೆಬ್ರಿಟಿ ಬಂದು ಹೇಳಿಕೆಗಳನ್ನು ನೀಡಿದರು ಎಂದು ಅವರ ಮಾತಿಗೆ ಮಣಿದು ನಿಯಮವನ್ನೇ ವಾಪಸ್ ಪಡೆಯಿತು. ಇದರಿಂದ ಇಂದು ಇಷ್ಟುದೊಡ್ಡ ಬೆಲೆ ತೆರಬೇಕಾದ ಸ್ಥಿತಿ ಬಂದಿದೆ. ಯಾರದೋ ಮಾತು ಕೇಳಿ ತಜ್ಞರು ನೀಡಿದ ಎಚ್ಚರಿಕೆಯನ್ನೂ ಕಡೆಗಣಿಸಿದ ಕ್ರಮ ಸರಿಯಲ್ಲ ಎಂದು ಕಿಡಿಕಾರಿದರು.