Breaking News

ಜೀವ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ರೈಲ್ವೆ ನೌಕರ: ಮೈ ನವಿರೇಳಿಸುವ ವಿಡಿಯೋ

Spread the love

ಮುಂಬೈ, ಏಪ್ರಿಲ್ 19: ರೈಲಿನಡಿ ಸಿಕ್ಕಿ ಛಿದ್ರವಾಗುವಂತಿದ್ದ ಮಗುವನ್ನು ಕಣ್ರೆಪ್ಪೆ ಮಿಟುಕಿಸುವುದರೊಳಗೆ ರಕ್ಷಿಸಿದ ಕೇಂದ್ರ ರೈಲ್ವೆಯ (ಮುಂಬೈ ವಿಭಾಗ) ಪಾಯಿಂಟ್ಸ್‌ಮ್ಯಾನ್ ಮಯೂರ್ ಶೆಲ್ಖೆ ಅವರು ‘ಹೀರೋ’ ಆಗಿ ಹೊರಹೊಮ್ಮಿದ್ದಾರೆ. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಪುಟಾಣಿಯ ಜೀವ ಉಳಿಸಿದ ಮಯೂರ್ ಅವರ ಶೌರ್ಯವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

ಮಹಾರಾಷ್ಟ್ರದ ಮುಂಬೈನಲ್ಲಿರುವ ವಾಂಗಾನಿ ಉಪನಗರ ರೈಲ್ವೆ ನಿಲ್ದಾಣದಲ್ಲಿ ನಡೆದ ಈ ರೋಮಾಂಚನಕಾರಿ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಮಹಿಳೆ ಮತ್ತು ಮಗುವೊಂದು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2ರಲ್ಲಿ ನಡೆದು ಸಾಗುತ್ತಿದ್ದರು. ಪ್ಲಾಟ್‌ಫಾರ್ಮ್‌ನಲ್ಲಿ ರೈಲ್ವೆ ಹಳಿಯ ಸಮೀಪ ಸಾಗಿದ ಮಗು ಆಯ ತಪ್ಪಿ ರೈಲ್ವೆ ಹಳಿ ಮೇಲೆ ಬಿದ್ದಿದೆ. ಕೂಡಲೇ ಮಗು ಹಳಿಯಿಂದ ಎದ್ದು ಪ್ಲಾಟ್‌ಫಾರ್ಮ್ ಮೇಲೆ ಏರಲು ಪ್ರಯತ್ನಿಸಿದೆ. ಎದುರಿನಿಂದ ರೈಲು ಬರುತ್ತಿರುವುದನ್ನು ಗಮನಿಸಿದ ಮಹಿಳೆ ಗಾಬರಿಯಿಂದ ಕಂಗಾಲಾಗಿ ಅಳುತ್ತಾ ನಿಂತಿದ್ದಾರೆ.

ಪ್ಲಾಟ್‌ಫಾರ್ಮ್ ಹತ್ತಲು ಪ್ರಯತ್ನಿಸುತ್ತಿದ್ದ ಮಗುವಿಗೆ ಎತ್ತರ ಎಟುಕದೆ ಮತ್ತೆ ಹಳಿ ಮೇಲೆ ಬೀಳುವ ಅಪಾಯ ಇತ್ತು. ಎದುರಿನಿಂದ ರೈಲೊಂದು ವೇಗವಾಗಿ ಬರುತ್ತಿತ್ತು. ಇದನ್ನು ಕಂಡ ಪಾಯಿಂಟ್ಸ್‌ಮ್ಯಾನ್ ಮಯೂರ್ ಶೆಲ್ಖೆ ಕೂಡಲೇ ಹಳಿಯ ಮೇಲೆ ಹಾರಿ ಮಗುವಿನತ್ತ ಧಾವಿಸಿದ್ದಾರೆ. ಕೇವಲ ಏಳೇ ಸೆಕೆಂಡಿನಲ್ಲಿ ಅಲ್ಲಿಗೆ ಓಡಿ ಮಗುವನ್ನು ಪ್ಲಾಟ್‌ಫಾರ್ಮ್ ಮೇಲೆ ಎತ್ತಿ ಇರಿಸಿ ತಾವೂ ಸುರಕ್ಷಿತರಾಗಿ ಪ್ಲಾಟ್‌ಫಾರ್ಮ್ ಮೇಲೆ ಏರಿದ್ದಾರೆ. ಮಗುವನ್ನು ರಕ್ಷಿಸಿದ ಕೆಲವೇ ಸೆಕೆಂಡಿನಲ್ಲಿ ರೈಲು ಆ ಜಾಗವನ್ನು ದಾಟಿದೆ.

ಮೈನವಿರೇಳಿಸುವ ಈ ಘಟನೆಯ ವಿಡಿಯೋವನ್ನು ಕೇಂದ್ರ ರೈಲ್ವೆ ಹಂಚಿಕೊಂಡಿದೆ. ‘ಕೇಂದ್ರ ರೈಲ್ವೆಯ ವಾಂಗಾನಿ ನಿಲ್ದಾಣದಲ್ಲಿ ಪಾಯಿಂಟ್ಸ್‌ಮ್ಯಾನ್ ಮಯೂರ್ ಶೆಲ್ಖೆ ಅವರು ಅರೆ ಕ್ಷಣದಲ್ಲಿ ಮಗುವೊಂದರ ಜೀವ ಉಳಿಸಿದ್ದಾರೆ. ಅವರು ಮಗುವಿನ ಜೀವ ಉಳಿಸಲು ತಮ್ಮ ಪ್ರಾಣವನ್ನು ಪಣವಾಗಿಟ್ಟಿದ್ದರು. ಅವರ ಈ ಮಹಾನ್ ಶೌರ್ಯ ಮತ್ತು ಕರ್ತವ್ಯ ಪ್ರಜ್ಞೆಗೆ ನಾವು ವಂದಿಸುತ್ತೇವೆ’ ಎಂದು ಅದು ಟ್ವೀಟ್ ಮಾಡಿದೆ.

ಮಯೂರ್ ಅವರ ಈ ಸಾಹಸ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಒಂದು ವೇಳೆ ಮಯೂರ್ ಅವರು ತಮ್ಮ ಜೀವದ ಬಗ್ಗೆ ಯೋಚಿಸಿದ್ದರೆ ಆ ಮಗು ರೈಲಿನ ಹೊಡೆತಕ್ಕೆ ಸಿಲುಕಿ ದೇಹ ಛಿದ್ರವಾಗುತ್ತಿತ್ತು. ಹಾಗೆಯೇ ಒಂದೆರಡು ಸೆಕೆಂಡ್ ವಿಳಂಬ ಮಾಡಿದ್ದರೂ ಮಗುವಿನ ಜತೆ ಅವರೂ ರೈಲಿನಡಿ ಅಪ್ಪಚ್ಚಿಯಾಗುತ್ತಿದ್ದರು. ಅವರ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದೇ ರೀತಿಯ ಇನ್ನೊಂದು ಘಟನೆಯಲ್ಲಿ ರೈಲ್ವೆ ರಕ್ಷಣಾ ದಳದ (ಆರ್‌ಪಿಎಫ್) ಮೂವರು ಸಿಬ್ಬಂದಿ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಯೊಬ್ಬನನ್ನು ರಕ್ಷಿಸಿದ್ದರು. ಫೆ. 24ರಂದು ವಿರಾರ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ