ರಾಯಚೂರು: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರತಾಪಗೌಡ ಕೂಡಾ ಕಾರಣಿಕರ್ತರು. ‘ಮಸ್ಕಿ ಕ್ಷೇತ್ರದ ರೈತರು ಪ್ರತಾಪಗೌಡ ಪಾಟೀಲ ಅವರನ್ನು ಚುನಾವಣೆಯಲ್ಲಿ ಆಯ್ಕೆಗೊಳಿಸುವುದಾಗಿ ಮಾತುಕೊಟ್ಟರೆ, 5- ಎ ಕಾಲುವೆ ಕಾಮಗಾರಿಯನ್ನು ಮಾಡಿಕೊಡುತ್ತೇನೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಜಿಲ್ಲೆಯ ಮಸ್ಕಿ ತಾಲ್ಲೂಕು ಬುದ್ದಿನ್ನಿ ಗ್ರಾಮದಲ್ಲಿ ಬುಧವಾರ ಕೃಷ್ಣಾ ಜಲಭಾಗ್ಯ ನಿಗಮ ನಿಯಮಿತದ ನಂದವಾಡಗಿ ಏತ ನೀರಾವರಿ ಯೋಜನೆಯ ಹನಿ ನೀರಾವರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
5-ಎ ಕಾಲುವೆಯು ತಾಂತ್ರಿಕ ಕಾರಣಗಳಿಂದ ಮಾಡುತ್ತಿಲ್ಲ. ಯೋಜನೆ ಆರಂಭಿಸುವುದಾಗಿ ಮಾತು ಕೊಡುವಂತೆ ರೈತರು ಕೋರಿದ್ದಾರೆ. ಕಾಲುವೆ ಕಾಮಗಾರಿ ಜಾರಿಗೆ ಏನೇ ಅಡಚಣೆಗಳಿದ್ದರೂ ಮಾಡಿಕೊಡಲು ನಾನು ಬದ್ಧನಾಗಿದ್ದೇನೆ. ರೈತರು ಕೂಡಾ ನನ್ನ ಬೇಡಿಕೆ ಈಡೇರಿಸಬೇಕು. ಮಸ್ಕಿ ಕ್ಷೇತ್ರದಲ್ಲಿ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ ಹೀಗಾಗಿ ಮಸ್ಕಿ ಕ್ಷೇತ್ರದ ರೈತರು ಪ್ರತಾಪಗೌಡ ಪಾಟೀಲ ಅವರನ್ನು ಚುನಾವಣೆಯಲ್ಲಿ ಆಯ್ಕೆಗೊಳಿಸುವುದಾಗಿ ಮಾತುಕೊಟ್ಟರೆ, 5- ಎ ಕಾಲುವೆ ಕಾಮಗಾರಿಯನ್ನು ಮಾಡಿಕೊಡುತ್ತೇನೆ’ ಎಂದು ರಮೇಶ ಜಾರಕಿಹೊಳಿ ತಿಳಿಸಿದರು.
‘ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ಯಾದಗಿರಿ ಭಾಗದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನೆಲ್ಲ ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲು ಯೋಜಿಸಿದ್ದೇನೆ. ಇದರಲ್ಲಿ ಯಾವುದೇ ಜಾತಿ, ರಾಜಕೀಯ ಬೆರೆಸದೆ, ಯೋಜನೆಗಳನ್ನು ಪೂರ್ಣ ಮಾಡಲಾಗುವುದು. ನೀರಾವರಿ ಯೋಜನೆ ಎಲ್ಲ ರೈತರಿಗೂ ಅನುಕೂಲವಾಗಲಿದೆ’ ಎಂದು ತಿಳಿಸಿದರು.